ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ
ಕರಾವಳಿಯಲ್ಲಿ ಶುಕ್ರವಾರ ಬಿಸಿಲಿನ ತೀವ್ರತೆಯ ನಡುವೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೊದಲ ದಿನ ಒಟ್ಟು 294 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು.ದಕ್ಷಿಣ ಕನ್ನಡ ಜಿಲ್ಲೆಯ 92 ಪರೀಕ್ಷಾ ಕೇಂದ್ರಗಳಲ್ಲಿ 28,728 ಅಭ್ಯರ್ಥಿಗಳು ಯಾವುದೇ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪ್ರಥಮ ಪರೀಕ್ಷೆಯನ್ನು ಬರೆದಿದ್ದಾರೆ. ಇದರಲ್ಲಿ ಮೊದಲ ದಿನವೇ ಕನ್ನಡ, ಹಿಂದಿ, ಮರಾಠಿ, ತುಳು, ಉರ್ದು, ಇಂಗ್ಲಿಷ್ ಹಾಗೂ ಸಂಸ್ಕೃತ ವಿಷಯದ ಭಾಷಾ ಪರೀಕ್ಷೆ ನಡೆದಿದ್ದು, ದ.ಕ. ಜಿಲ್ಲೆಯಲ್ಲಿ ಒಟ್ಟು 229 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಕನ್ನಡ ಭಾಷಾ ಪರೀಕ್ಷೆಗೆ ಒಟ್ಟು 202 ಮಂದಿ ಗೈರಾಗಿದ್ದರೆ, ಇಂಗ್ಲಿಷ್ ಪರೀಕ್ಷೆಗೆ 23, ಹಾಗೂ ಸಂಸ್ಕೃತ ಭಾಷಾ ಪರೀಕ್ಷೆಗೆ 4 ಮಂದಿ ಹಾಜರಾಗಿಲ್ಲ ಎಂದು ಎದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮಾಹಿತಿ ತಿಳಿಸಿದೆ.ಹಾಜರಾದ ವಿದ್ಯಾರ್ಥಿಗಳಲ್ಲಿ 19,911 ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ, 7,957 ಇಂಗ್ಲಿಷ್, 158 ಮಂದಿ ಉರ್ದು ಹಾಗೂ 702 ಅಭ್ಯರ್ಥಿಗಳು ಸಂಸ್ಕೃತ ಭಾಷಾ ಪರೀಕ್ಷೆ ಬರೆದಿದ್ದಾರೆ. ಬಂಟ್ವಾಳದಲ್ಲಿ ಒಟ್ಟು ನೋಂದಾಯಿತ 5,879 ಅಭ್ಯರ್ಥಿಗಳಲ್ಲಿ 5,827, ಬೆಳ್ತಂಗಡಿಯಲ್ಲಿ 4,074ರಲ್ಲಿ 4,050, ಮಂಗಳೂರು ಉತ್ತರದಲ್ಲಿ 5,301ರಲ್ಲಿ 5,269, ಮಂಗಳೂರು ದಕ್ಷಿಣದಲ್ಲಿ 5,075ರಲ್ಲಿ 5,038, , ಮೂಡುಬಿದಿರೆಯಲ್ಲಿ 1,973ರಲ್ಲಿ 1,946, ಪುತ್ತೂರಿನಲ್ಲಿ 4,716ರಲ್ಲಿ 4,695, ಸುಳ್ಯದಲ್ಲಿ 1,939ರಲ್ಲಿ 1,903 ಮಂದಿ ಪರೀಕ್ಷೆ ಬರೆದಿದ್ದಾರೆ.ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿತ್ತು. ನಗರದ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಮೇಲ್ವಿಚಾರಕರು ನೀರಿನ ಬಾಟಲಿ ಇರಿಸಿಕೊಂಡು ವಿದ್ಯಾರ್ಥಿಗಳು ಕೇಳಿದಾಕ್ಷಣ ನೀಡುವ ವ್ಯವಸ್ಥೆ ಮಾಡಿದ್ದರು. ಪ್ರಥಮ ದಿನದ ಪರೀಕ್ಷೆ ಜಿಲ್ಲಾ ಶಿಕ್ಷಣ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳ ಸಹಕಾರದಲ್ಲಿ ಸುಸೂತ್ರವಾಗಿ ನೆರವೇರಿದೆ.
ಉಡುಪಿ ವರದಿ: ಪ್ರಥಮ ಭಾಷೆ ಕನ್ನಡ ಪರೀಕ್ಷೆಯು ಉಡುಪಿ ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ಇಲ್ಲದೆ ಸಾಂಗವಾಗಿ ನಡೆದಿದೆ. ಮೊದಲ ದಿನ ಜಿಲ್ಲೆಯಲ್ಲಿ ಒಟ್ಟು 68 ಮಂದಿ ಗೈರು ಹಾಜರಾಗಿದ್ದಾರೆ.ಜಿಲ್ಲೆಯಲ್ಲಿ ಈ ಸಾಲಿನಲ್ಲಿ 51 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 13,895 ಮಂದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಅವರಲ್ಲಿ ಮೊದಲ ದಿನ ಒಟ್ಟು 13830 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 38 ಹುಡುಗರು ಮತ್ತು 27 ಮಂದಿ ಹುಡುಗಿಯರು ಪರೀಕ್ಷೆಗೆ ಹಾಜರಾಗಿಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರ ಸಹಿತ, ಪರೀಕ್ಷಾ ಅವ್ಯವಹಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶುಕ್ರವಾರ ಸ್ವತಃ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮತ್ತು ಇತರ ಅಧಿಕಾರಿಗಳು ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು‘ಬಿಸಿಲ ಬೇಗೆಯಿಂದ ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಆಯಾ ತಾಲೂಕು ಆಸ್ಪತ್ರೆಗಳ ಮೂಲಕ ಅಗತ್ಯ ಸಿಬ್ಬಂದಿ ನಿಯೋಜನೆಯೊಂದಿಗೆ ಈ ಬಾರಿ ಒಆರ್‌ಎಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.’
-ಡಾ. ಎಚ್.ಆರ್. ತಿಮ್ಮಯ್ಯ, ಆರೋಗ್ಯಾಧಿಕಾರಿ, ದ.ಕ.