- ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷ ದಿನೇಶ್ ಶೆಟ್ಟಿ ಮಾಹಿತಿ । ಪ್ರವೇಶ ಶುಲ್ಕ ₹500, 9 ಸುತ್ತುಗಳಲ್ಲಿ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ದಾವಣಗೆರೆ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜನ್ಮದಿನದ ಅಂಗವಾಗಿ ಎಸ್ಸೆಸ್ಸೆಂ ಕಪ್- ರಾಷ್ಟ್ರಮಟ್ಟದ ಫಿಡೆ ರೇಟಿಂಗ್ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯನ್ನು ಸೆ.20ರಂದು ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸೆ.20ರಂದು ಬೆಳಗ್ಗೆ 10 ಗಂಟೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಪಂದ್ಯಾವಳಿಗೆ ಚಾಲನೆ ನೀಡುವರು. ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಚೆಸ್ ಫೆಡರೇಷನ್ ಅನುಮೋದನೆಯೊಂದಿಗೆ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಿದ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಟಿಂಗ್ ದೊರೆಯಲಿದೆ. ಪಂದ್ಯಾವಳಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಪಂದ್ಯಾವಳಿಯು 9 ಸುತ್ತುಗಳಲ್ಲಿ ನಡೆಯಲಿದೆ. ವಿಜೇತರಿಗೆ ಒಟ್ಟು ₹1,00,000 ನಗದು ಬಹುಮಾನ, 90 ಟ್ರೋಫಿ ಹಾಗೂ 60 ಪದಕ ನೀಡಲಾಗುತ್ತವೆ. 5, 7, 9, 11, 13, 15, 17 ಮತ್ತು 19 ವಯೋಮಾನದ ವಿಭಾಗಗಳಲ್ಲಿ ಪ್ರತ್ಯೇಕ ಬಹುಮಾನಗಳಿದ್ದು, ಪ್ರತಿ ವಿಭಾಗದಲ್ಲಿ ಮೊದಲ 3 ಸ್ಥಾನಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ಹಾಗೂ 4ರಿಂದ 10ನೇ ಸ್ಥಾನಕ್ಕೆ ಪದಕಗಳನ್ನು ನೀಡಲಾಗುತ್ತದೆ. ಮುಖ್ಯ ವಿಭಾಗದಲ್ಲಿ ಪ್ರಥಮ ಬಹುಮಾನ ₹10,000, ದ್ವಿತೀಯ ₹7,000 ಹಾಗೂ ತೃತೀಯ 5,000 ಸೇರಿದಂತೆ 30ನೇ ಸ್ಥಾನದವರೆಗೆ ನಗದು ಬಹುಮಾನ ಮತ್ತು ಟ್ರೋಫಿ ಕೊಡಲಾಗುತ್ತದೆ. ಅಲ್ಲದೆ, ಬೆಸ್ಟ್ ದಾವಣಗೆರೆ 20 ಟ್ರೋಫಿ, ಅನ್ ರೇಟೆಡ್ ಆಟಗಾರರು, ಯುವ ಆಟಗಾರರು, 40 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ಟಿ.ಯುವರಾಜ್, ಶಿವು ಶೆಟ್ಟಿ, ತರುಣ್, ಸತೀಶ್ ಶೆಟ್ಟಿ ಇದ್ದರು.
-7ಕೆಡಿವಿಜಿ35: ದಾವಣಗೆರೆಯಲ್ಲಿ ಎಸ್.ಎಸ್. ಜನ್ಮದಿನದ ಅಂಗವಾಗಿ ರಾಷ್ಟ್ರಮಟ್ಟದ ರ‍್ಯಾಪಿಡ್ ಚೆಸ್ ಪಂದ್ಯಾವಳಿ ಆಯೋಜಿಸಿರುವ ಕುರಿತು ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.