ನಮ್ಮವರಿಂದಲೇ ಇರಿತ: ಡಿಕೆ ಮಾರ್ಮಿಕ ನುಡಿ

KannadaprabhaNewsNetwork |  
Published : Jan 12, 2026, 02:00 AM IST
ಡಿಕೆಶಿ | Kannada Prabha

ಸಾರಾಂಶ

‘ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕುವವನಲ್ಲ. ನೇರ ಹೋರಾಟ ಮಾಡುವವನು. ಆದರೆ, ಬೇರೆಯವರಿಗಿಂತ ನಮ್ಮ ಸಮುದಾಯದವರೇ ಕೆಲವರು ನನ್ನ ಮೇಲಿನ ಅಸೂಯೆಯಿಂದ ಹಿಂದಿನಿಂದ ಮತ್ತು ಮುಂದಿನಿಂದ ಚಾಕು ಹಾಕುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕುವವನಲ್ಲ. ನೇರ ಹೋರಾಟ ಮಾಡುವವನು. ಆದರೆ, ಬೇರೆಯವರಿಗಿಂತ ನಮ್ಮ ಸಮುದಾಯದವರೇ ಕೆಲವರು ನನ್ನ ಮೇಲಿನ ಅಸೂಯೆಯಿಂದ ಹಿಂದಿನಿಂದ ಮತ್ತು ಮುಂದಿನಿಂದ ಚಾಕು ಹಾಕುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಉದ್ಯಮಿ ಒಕ್ಕಲಿಗ ಎಕ್ಸ್‌ಪೋ 2026’ ಕಾರ್ಯಕ್ರಮದಲ್ಲಿ ಮಾತನಾಡಿ, ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಾನೆಷ್ಟು ಪ್ರಮಾಣಿಕವಾಗಿದ್ದೆ ಎನ್ನುವುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ, ಈಗ ಅವರೇ ಇವತ್ತು ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಇವೆಲ್ಲವೂ ಸಹಜ. ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನನಗೆ ಯಾರ ಪ್ರಮಾಣಪತ್ರವೂ ಬೇಡ. ನನ್ನ ಆತ್ಮಸಾಕ್ಷಿಯನ್ನು ನಾನು ಮೆಚ್ಚಿಸಿದರೆ ಸಾಕು ಎಂದರು.

ಪಕ್ಷದವರು ತೀರ್ಮಾನಿಸುವ ವಿಶ್ವಾವಿದೆ:

ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ. ನಾವು ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಾ ಹೋದರೆ ಸಾಕು. ಯಾರು ಯಾವಾಗ ಬೇಕಾದರೂ ಏನಾದರೂ ಆಗಬಹುದು ಎಂಬ ನಂಬಿಕೆ ಇದೆ. ಮುಂದೆಯೂ ನನ್ನ ಬಗ್ಗೆ ಪಕ್ಷದವರು ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ಶಿವಕುಮಾರ್‌ ಹೇಳಿದರು.

ರಾಜಕೀಯ ಮಾಡಿ ನನ್ನನ್ನು ಜೈಲಿಗೆ ಹಾಕಿದಾಗ, ನನಗಾಗಿ ಪ್ರಾರ್ಥನೆ ಮಾಡಿದಿರಿ, ಹರಕೆ ಕಟ್ಟಿಕೊಂಡಿದ್ದೀರಿ. ಈಗಲೂ ಅದನ್ನೇ ಮಾಡುತ್ತಿದ್ದೀರಿ ಎಂಬ ಅರಿವು ನನಗಿದೆ. ಪಕ್ಷಾತೀತವಾಗಿ, ಸಮುದಾಯತೀತವಾಗಿ ಜನ ನನಗೆ ಒಳ್ಳೆಯದು ಬಯಸುತ್ತಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ. ಶ್ರಮಕ್ಕೆ ಪ್ರತಿಫಲ ಸಿಗುತ್ತೆ. ಟೀಕೆಗಳು ಸಾಯುತ್ತವೆ, ನೀವು ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ತಿಳಿಸಿದರು.

ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ:

ದೇವರು ವರ, ಶಾಪ ಯಾವುದನ್ನೂ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಆ ಅವಕಾಶ ಸಿಕ್ಕಾಗ ಶ್ರಮವಹಿಸಿ ಯಶಸ್ಸು ಸಾಧಿಸಬೇಕು. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ನೀವು ನಿಮ್ಮ ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕು. ಯಾವುದೇ ಉದ್ಯಮ ನಡೆಸುತ್ತಿದ್ದರೂ ನಂಬಿಕೆ ಉಳಿಸಿಕೊಳ್ಳಿ. ಆಗ ಗ್ರಾಹಕರು ನಿಮ್ಮ ಬಳಿ ಬರುತ್ತಾರೆ. ನೀವು ನಂಬಿಕೆ ಮೂಲಕ ನಿಮ್ಮ ಬ್ರಾಂಡ್ ಹೆಚ್ಚಿಸಿಕೊಳ್ಳಬೇಕು ಎಂದು ಒಕ್ಕಲಿಗ ಸಮುದಾಯದ ಉದ್ಯಮಿಗಳಿಗೆ ಇದೇ ವೇಳೆ ಅವರು ಸಲಹೆ ನೀಡಿದರು.

ಹಣ್ಣು ಕೆಂಪಾಗಿ, ಚೆನ್ನಾಗಿದ್ದರೆ ಮಾತ್ರ ಕಲ್ಲು ಹೊಡೆಯುತ್ತಾರೆ. ನೀವು ಬಲಿಷ್ಠವಾಗಿದ್ದರೆ ಶತ್ರುಗಳು ಜಾಸ್ತಿ. ನಿಮ್ಮ ಮೇಲೆ ಅಸೂಯೆ ಪಡುವವರು ಹೆಚ್ಚು, ಹೀಗಾಗಿ ಎಚ್ಚರಿಕೆಯಿಂದ ಇರಿ. ನಾನು ವಯಸ್ಸಿನಲ್ಲಿ ಚಿಕ್ಕವನಾದರೂ ಅನುಭವ ದೊಡ್ಡದಿದೆ. ಊರಿನಲ್ಲಿ ಹುಟ್ಟಿದ ಹೋರಿಗಳೆಲ್ಲ ಬಸವ ಆಗುವುದಿಲ್ಲ. ಎಲ್ಲರೂ ನಾಯಕರಾಗಲು ಆಗುವುದಿಲ್ಲ. ನಿಮ್ಮ ಪರವಾಗಿ ನಾನು ಸಹೋದರನಾಗಿ, ಸ್ನೇಹಿತನಾಗಿ ಸದಾ ಇರುತ್ತೇನೆ ಎಂದರು.

ಯಾರಿಗೂ ಸಾಲ ಕೊಡಬೇಡಿ:

ಇದೇ ವೇಳೆ ಒಕ್ಕಲಿಗ ಸಮುದಾಯದ ಉದ್ಯಮಿಗಳಿಗೆ ಅಕ್ಬರ್‌ ಮತ್ತು ಬೀರ್‌ಬಲ್‌ ಕಥೆ, ಸತ್ಯಸಾಯಿ ಬಾಬಾ ಅವರು ನೀಡಿದ್ದ ಮಾರ್ಗದರ್ಶನ, ತಾವು ಬಂದೀಖಾನೆ ಸಚಿವರಾಗಿದ್ದಾಗ ಆದ ಅನುಭವಗಳನ್ನೆಲ್ಲ ಉದಾಹರಣೆ ಸಹಿತ ವಿವರಿಸಿದರು.

ನೀವೆಲ್ಲರೂ ಒಕ್ಕಲಿಗರು. ಈ ಹೆಸರೇ ನಿಮ್ಮ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ. ನೀವು ಉದ್ಯಮಿಗಳಾಗಿ ಬೆಳೆಯಲು ಮುಂದಾಗಿದ್ದೀರಿ. ಅನೇಕರು ಯಶಸ್ವಿಯಾಗಿದ್ದೀರಿ. ನೀವು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ನೀಡಬೇಡಿ. ಕೊಟ್ಟರೆ ನಿಮ್ಮ ಕಥೆ ಮುಗೀತು. ನೀವು ಜನರನ್ನು ಮಾತ್ರ ನಂಬಬೇಕು, ನಂಬಿಕೆಗೆ ಪೆಟ್ಟು ಬೀಳದಂತೆ ಎಚ್ಚರಿಕೆ ವಹಿಸಬೇಕು. ನಿಮಗೆ ಯಾರಾದರೂ ತೊಂದರೆ ಕೊಡುವವರು, ಮೋಸ ಮಾಡುವವರು ಇದ್ದರೆ, ಅವರು ನಿಮ್ಮ ಅಕ್ಕಪಕ್ಕದಲ್ಲಿ ಇರುವವರೇ ಆಗಿರುತ್ತಾರೆ. ಬೇರೆಯವರು ತೊಂದರೆ ಕೊಡಲ್ಲ. ನೀವು ಜಾಗರೂಕರಾಗಿ ಇರಬೇಕು. ನೀವು ಹತ್ತಾರು ಜನರಿಗೆ ಉದ್ಯೋಗ ನೀಡುವವರು. ಹಾಗಾಗಿ ನನ್ನ ಅನುಭವದ ಸಲಹೆ ನೀಡುತ್ತಿದ್ದೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ