ಕ್ರೀಡಾಂಗಣ ಅವ್ಯವಸ್ಥೆ: ಉಪಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಜಿಲ್ಲೆಯ ಒನಕೆ ಓಬವ್ವ ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಕುರಿತು ಕನ್ನಡಪ್ರಭ ಪತ್ರಿಕೆ ಪ್ರಕಟಿಸಿದ್ದ ವರದಿ ಆಧರಿಸಿ ಉಪಲೋಕಾಯುಕ್ತ ಅವರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆ ಕುರಿತಂತೆ ಡಿ.5ರಂದು ಕನ್ನಡಪ್ರಭ ಪ್ರಕಟಿಸಿದ ವಿಶೇಷ ವರದಿ ಆಧರಿಸಿ ಕರ್ನಾಟಕ ಉಪ ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಮೂರು ವಾರದ ಒಳಗೆ ವರದಿ ಸಲ್ಲಿಸುವಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

"ಒನಕೆ ಓಬವ್ವ ಕ್ರೀಡಾಂಗಣಕ್ಕೆ ಬೇಕು ಕಾಯಕಲ್ಪ " ಎಂಬ ತಲೆಬರಹದಡಿ ಕನ್ನಡಪ್ರಭ ವರದಿ ಮಾಡಿತ್ತು.

ಸೌಲಭ್ಯಗಳ ಕೊರತೆಯಿಂದ ಆಟದಂಗಳ ಬಸವಳಿದಿದ್ದು, ಅಧಿಕಾರಗಳು ಅನುದಾನದ ಕೊರತೆ ಸಬೂಬುಗಳ ಹೇಳುತ್ತಿದ್ದಾರೆ ಎಂಬ ಅಂಶವ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

ಚರಿತಾರ್ಹ ಮಹಿಳೆ ವೀರವನಿತೆ ಒನಕೆ ಓಬವ್ವಳ ಹೆಸರಿಟ್ಟುಕೊಂಡಿರುವ ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣ ಸೌಲಭ್ಯಗಳ ಕೊರತೆಯಿಂದ ಬಸವಳಿದೆ. ಕನಿಷ್ಟ ಮೂಲ ಸೌಕರ್ಯಗಳಾದ ಶೌಚಾಲಯ, ಕುಡಿವ ನೀರು, ಬೆಳಕಿನ ವ್ಯವಸ್ಥೆಗೂ ಕ್ರೀಡಾ ಇಲಾಖೆಯಲ್ಲಿ ಅನುದಾನವಿಲ್ಲ. ಮುಂಜಾನೆ ಹಾಗೂ ಸಂಜೆ ವೇಳೆ ಒಂದೆರೆಡು ರೌಂಡ್ ಹಾಕುವ ಇಳಿವಯಸ್ಸಿನ ವಾಯು ವಿಹಾರಿಗಳಂತೂ ಇಲ್ಲಿನಲ್ಲ ಸಮಸ್ಯೆ ಎದುರಿಸುತ್ತಿದ್ದು, ಕ್ರೀಡಾ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂಬುದ ವರದಿಯಲ್ಲಿ ಸ್ಪಷ್ಟಪಡಿಸಲಾಗಿತ್ತು.

ವಾಯುವಿಹಾರಿಗಳ ಅನುಕೂಲಕ್ಕಾಗಿ ಸ್ಟೇಡಿಯಂ ಸುತ್ತಲೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಸ್ಟೇಡಿಯಂ ಸುತ್ತಲೂ ಇರುವ 13 ವಿದ್ಯುತ್ ಕಂಬದ ಪೈಕಿ ಒಂದರಲ್ಲಿ ಮಾತ್ರ ದೀಪ ಪ್ರಕಾಶಿಸುತ್ತಿದೆ. ಉಳಿದಂತೆ ಇತರೆ ಕಂಬಗಳು ಕತ್ತಲಿಗೆ ಸಾಕ್ಷಿಯಾಗಿವೆ. ಕತ್ತಲಲ್ಲಿ ವಾಕ ಮಾಡಲು ಸಾರ್ವಜನಿಕರು ಹಾಗೂ ಹಿರಿಯ ನಾಗರಕರು ಆತಂಕ ಎದುರಿಸುತ್ತಿದ್ದಾರೆ. ವಾಕಿಂಗ್ ದಾರಿಯಲ್ಲಿ ಹಾವುಗಳು ಹರಿದಾಡುತ್ತಿವೆ. ಎಷ್ಟೋ ಸಾರಿ ಪಾದಚಾರಿಗಳ ಕಾಲಿಗೆ ಹಾವುಗಳು ಸಿಕ್ಕಿಹಾಕಿಕೊಂಡಿರುವ ಪ್ರಸಂಗಗಳಿವೆ. ಸದಾ ಜೀವಭಯದಿಂದ ವಾಕಿಂಗ್ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎಂಬ ಸಂಗತಿ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು.

ನಿತ್ಯ ಮಂಜಾನೆ ಹಾಗೂ ಸಂಜೆ 500ಕ್ಕೂ ಹೆಚ್ಚು ಮಂದಿ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ವಾಕ್ ಮಾಡುತ್ತಾರೆ. ಸಂಜೆ ವೇಳೆ ಅಧಿಕ ಪ್ರಮಾಣದಲ್ಲಿ ಮಹಿಳೆಯರು ಬರುತ್ತಾರೆ. ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ ಪೌರಾಯುಕ್ತರು, ಕ್ರೀಡಾ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರೂ ಮಹಿಳೆಯರೇ ಇದ್ದಾರೆ. ಕ್ರೀಡಾಂಗಣಕ್ಕೆ ಒನಕೆ ಓಬವ್ವ ಹೆಸರಿಡಲಾಗಿದ್ದೂ ಆಕೆಯೂ ಕೂಡಾ ಮಹಿಳೆಯೇ ಆಗಿದ್ದಾಳೆ. ಯಾವುದಾದರೊಂದು ಮೂಲದಿಂದ ಅನುದಾನ ತಂದು ಕ್ರೀಡಾಂಗಣಕ್ಕೆ ಅಂಟಿ ಕೊಂಡಿರುವ ಇಲ್ಲಗಳ ಶಾಪ ವಿಮೋಚನೆಯಾಗಲಿ ಎಂದು ಆಶಿಸಲಾಗಿತ್ತು.

ವರದಿಯನ್ನು ಗಮನಿಸಿದ ಉಪ ಲೋಕಾಯುಕ್ತರು ಕ್ರೀಡಾ ಇಲಾಖೆ ಅಧಿಕಾರಿಗೆ ನೋಟೀಸು ಜಾರಿ ಮಾಡಿ ಮೂರು ವಾರದಒಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

Share this article