ಮಂಡ್ಯ ಮಂಜುನಾಥ
ಮಂಡ್ಯ ತಾಲೂಕು ಪಂಚಾಯ್ತಿಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಬಾಧಿಸುತ್ತಿದ್ದು, ಕೆಲಸದ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ. ನಿಯೋಜನೆ ಮೇಲೆ ನೇಮಕಗೊಂಡವರು ಪಾರ್ಶ್ವವಾಯು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಎಫ್‌ಡಿಸಿಗಳ ಪೈಕಿ ಒಬ್ಬರು ಕಾಲುಮುರಿತಕ್ಕೊಳಗಾಗಿದ್ದಾರೆ. ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಇದರಿಂದ ತಾಪಂ ಕಚೇರಿ ಕೆಲಸಗಳು ಕುಂಟುತ್ತಾ ತೆವಳುತ್ತಾ ಸಾಗಿದ್ದು, ಕೋಮಾ ಸ್ಥಿತಿಗೆ ತಲುಪುವಂತಾಗಿದೆ.
ಮಂಡ್ಯ ತಾಪಂ ಕಚೇರಿಗೆ ಮಂಜೂರಾಗಿರುವ ೨೫ ಹುದ್ದೆಗಳಲ್ಲಿ ೧೦ ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ೧೫ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಕಾರ್ಯನಿರ್ವಹಿಸುತ್ತಿರುವವರೂ ಅನಾರೋಗ್ಯ, ಪಾರ್ಶ್ವವಾಯು ಹಾಗೂ ಅಪಘಾತದಿಂದ ಕಾಲುಮುರಿತಕ್ಕೊಳಗಾಗಿ ನಾಲ್ವರು ಬಳಲುತ್ತಿದ್ದು, ಕೇವಲ ಆರು ಮಂದಿ ಎಲ್ಲಾ ಕಾರ್ಯವನ್ನು ನಿರ್ವಹಿಸುವಂತಾಗಿದೆ.ಮುಂದಿನ ಎರಡು ತಿಂಗಳಲ್ಲಿ ನಿಯೋಜನೆಗೆ ಬಂದವರೂ ಸೇರಿದಂತೆ ತಾಪಂನ ಪ್ರಥಮ ದರ್ಜೆ ಸಹಾಯಕರು ಒಬ್ಬರು ನಿವೃತ್ತರಾಗುತ್ತಿರುವುದರಿಂದ ಸಾರ್ವಜನಿಕರ ಕೆಲಸಗಳು ಹಳ್ಳಹಿಡಿಯುವಂತ ಸ್ಥಿತಿ ಎದುರಾಗಿದೆ.
ಲಿಪಿಕ ಹುದ್ದೆಗಳ ಪೈಕಿ ಎರಡು ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಖಾಲಿ ಉಳಿದಿವೆ. ಪ್ರಗತಿ ಸಹಾಯಕರ ಒಂದು ಹುದ್ದೆ ಭರ್ತಿಯಾಗಿಲ್ಲ. ಒಂದು ಶೀಘ್ರ ಲಿಪಿಗಾರರ ಹುದ್ದೆಯೂ ಖಾಲಿ ಬಿದ್ದಿದೆ. ಎರಡು ದ್ವಿತೀಯ ದರ್ಜೆ ಸಹಾಯಕರನ್ನೂ ನೇಮಿಸಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಇಬ್ಬರು ಬೆರಳಚ್ಚುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಪಂಚಾಯ್ತಿ ಆದೇಶದಂತೆ ನಿಯೋಜನೆ ಮೇಲೆ ತಾಲೂಕು ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಪಿಡಿಒಗಳಲ್ಲಿ ಮದ್ದೂರು ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಪಂ ಪಿಡಿಒ ಎಚ್.ಬಸವರಾಜು ಅವರು ಪಾರ್ಶ್ವವಾಯು ಪೀಡಿತರಾಗಿದ್ದು ಮೇ ತಿಂಗಳಲ್ಲಿ ನಿವೃತ್ತರಾಗುತ್ತಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ತಡಗವಾಡಿ ಗ್ರಾಪಂ ಪಿಡಿಒ ಎಂ.ಗೌರಮ್ಮ ಕೂಡ ಪಾರ್ಶ್ವವಾಯು ಪೀಡಿತರಾಗಿರುವುದರಿಂದ ಟಪಾಲು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಾಪಂನಲ್ಲಿ ಖಾಲಿ ಇರುವ ೭ ಲಿಪಿಕ ಹುದ್ದೆಗಳಿಗೆ ಪ್ರಸ್ತುತ ವಿವಿಧ ಗ್ರಾಪಂಗಳ ಮೂವರು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮಂಡ್ಯ ತಾಲೂಕು ಶಿವಳ್ಳಿ ಗ್ರಾಪಂನ ಸಿ.ಎನ್.ಯೋಗೇಶ್ವರಿ ನರೇಗಾ, ಕುಡಿಯುವ ನೀರು, ಎಸ್‌ಬಿಎಂ ಹಾಗೂ ಇತರೆ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ. ಎಚ್.ಮಲ್ಲೀಗೆರೆ ಗ್ರಾಪಂನ ಬಿ.ಸಿ.ಪ್ರಶಾಂತ್ ಅವರು ಎನ್‌ಆರ್‌ಎಲ್‌ಎಂ ಯೋಜನೆ, ಅನಿರ್ಬಂಧಿತ ಅನುದಾನ, ಗ್ರಾಪಂ ಜಮಾಬಂದಿ, ಅಭಿಲೇಖಾಲಯ ನಿರ್ವಹಣೆ, ತಾಪಂ ಡಿಸಿ ಬಿಲ್ ಮತ್ತು ಇತರೆ ಯೋಜನೆಗಳನ್ನು ನಿರ್ವಹಿಸುತ್ತಿದ್ದರೆ, ಸಂತೆಕಸಲಗೆರೆ ಗ್ರಾಪಂನ ಸಿ.ವಿ.ಜಯಲಕ್ಷ್ಮೀ ಐಪಿಜಿಆರ್‌ಎಸ್, ಇ-ಸ್ವತ್ತು, ಗ್ರಾಪಂ ೧೪ ಮತ್ತು ೧೫ನೇ ಹಣಕಾಸು ಯೋಜನೆ, ಗ್ರಾಪಂ, ಬಜೆಟ್, ತಾಪಂ ವಾರ್ಷಿಕ ಲೆಕ್ಕಪತ್ರಗಳು, ಗ್ರಾಪಂ ಅಡ್‌ಹಾಕ್ ಹಾಗೂ ಇತರೆ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ.
ಮಂಡ್ಯ ತಾಲೂಕು ಪಂಚಾಯ್ತಿ ವ್ಯಾಪ್ತಿಗೆ ನಾಲ್ವರು ಶಾಸಕರು ಒಳಪಡುತ್ತಾರಾದರೂ ನೌಕರರ ಕೊರತೆಯಿಂದ ಆಡಳಿತಾತ್ಮಕ ಮತ್ತು ಸಾರ್ವಜನಿಕ ಕೆಲಸಗಳಿಗೆ ಹಿನ್ನಡೆಯಾಗುತ್ತಿದ್ದರೂ ಹುದ್ದೆ ಭರ್ತಿ ಸಂಬಂಧ ಇದುವರೆಗೂ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಕರ್ನಾಟಕ ಐದನೇ ಹಣಕಾಸು ಆಯೋಗದ ಅಧ್ಯಕ್ಷರು ಬಂದ ಸಮಯದಲ್ಲೂ ಸ್ಥಳೀಯ ಸಂಸ್ಥೆಗಳಾದ ಜಿಪಂ, ತಾಪಂ, ಗ್ರಾಪಂಗಳಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಶಿಫಾರಸು ಮಾಡುವಂತೆಯೂ ಅಧಿಕಾರಿಗಳು ಗಮನಸೆಳೆದಿದ್ದಾರೆ. ಆದರೆ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸಬೇಕಿದೆ.ಮಂಡ್ಯ ತಾಲೂಕು ಪಂಚಾಯ್ತಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಕೆಲವರು ಅನಾರೋಗ್ಯದಿಂದ ಬಳಲುತ್ತಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ಗ್ರಾಮ ಪಂಚಾಯ್ತಿಯಿಂದ ನೌಕರರನ್ನು ನೇಮಿಸಿಕೊಡುವಂತೆ ಜಿಪಂ ಸಿಇಒಗೆ ಪತ್ರ ಬರೆದಿದ್ದೇನೆ.