ಗದಗ: ರಾಜ್ಯದಲ್ಲಿ ಸ್ಟ್ಯಾಂಪ್ ಪೇಪರ್‌ಗಳ ದರಗಳನ್ನು 40 ವರ್ಷಗಳಿಂದ ಪರಿಷ್ಕರಣೆ ಮಾಡಿರಲಿಲ್ಲ. ಈಗ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ಶನಿವಾರ ರೋಣ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟ್ಯಾಂಪ್ ಪೇಪರ್ ದರ 25, 30, 40 ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ, ಹಲವಾರು ವರ್ಷಗಳಿಂದ ಇದ್ದ ದರಗಳನ್ನೇ ಮುಂದುವರೆಸಿಕೊಂಡು ಬರಲಾಗಿತ್ತು, ಅಂತಹವುಗಳನ್ನು ನಾವು ಪರಿಷ್ಕರಣೆ ಮಾಡಿದ್ದೇವೆ ಎಂದರು.ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿರೋ ಸ್ಟ್ಯಾಂಪ್ ಪೇಪರ್ ದರವನ್ನು ಗಮನಿಸಲಾಗಿದೆ. ಅದಕ್ಕೆ ಸಮಾನ ಅಥವಾ ಅದಕ್ಕಿಂತ ಕಡಿಮೆ ಇರೋ ರೀತಿ ಪರಿಷ್ಕರಣೆ ಮಾಡಿದ್ದೇವೆ. ಬೇರೆ ರಾಜ್ಯಗಳಿಗಿಂತ ಹೆಚ್ಚು ಮಾಡಿಲ್ಲ, ಪುನರ್ ವಿಮರ್ಶೆ ಮಾಡಬೇಕು ಅಂದರೆ ಖಂಡಿತವಾಗಿ ಪುನರ್ ವಿಮರ್ಶೆ ಮಾಡುತ್ತೇವೆ. ಎಲ್ಲಾ ಮಾಹಿತಿ ಕಲೆ ಹಾಕಿ ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.ಬೆಳೆ ಹಾನಿ ಬರ ಪರಿಹಾರ ನೀಡುವಲ್ಲಿ ಕೇಂದ್ರದ ಧೋರಣೆ ವಿಚಾರ, ಪರಿಹಾರ ಕೊಡೋ ಉದ್ದೇಶದಿಂದ ರಾಜ್ಯಕ್ಕೆ ಬರಬೇಕು ಅಂತಾ ಸೆ. 23ರಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈಗಾಗಲೇ 6 ತಿಂಗಳಾಗಿದೆ. ಸಿಎಂ, ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ನಾನು ಕೇಂದ್ರದಲ್ಲಿ ಮಂತ್ರಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಡಿ. 19ರಂದು ನಾನು ಮತ್ತು ಸಿಎಂ ಪ್ರಧಾನಿಗಳನ್ನು ಭೇಟಿ ಆಗಿದ್ದೇವೆ.
ಡಿ. 20ರಂದು ಗೃಹ ಸಚಿವರನ್ನು ಭೇಟಿ ಆಗಿದ್ದೇವೆ. ಬರ ಪರಿಹಾರ ಕೊಡಲು ಒತ್ತಾಯ ಪೂರ್ವಕ ಮನವಿ ಮಾಡಿದ್ದೇವೆ. ಇಷ್ಟು ದಿನ ಕಳೆದರೂ ಅವರು ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ ಎಂದರು.ರೈತರ ತೊಂದರೆ ಮನಗಂಡು ರಾಜ್ಯ ಸರ್ಕಾರವೇ 34 ಲಕ್ಷ ರೈತರ ಖಾತೆಗಳಿಗೆ 2 ಸಾವಿರ ರುಪಾಯಿಯಂತೆ ಜಮಾ ಮಾಡಿದ್ದೇವೆ, ಈ ಹಿಂದೆ ಬರಗಾಲದಲ್ಲಿ ಯಾವ ಸರ್ಕಾರವೂ ಕೂಡಾ ಮೊದಲ ಹಂತದಲ್ಲಿ ಪರಿಹಾರ ಬಿಡುಗಡೆ ಮಾಡಿದ ಉದಾಹರಣೆ ಇಲ್ಲ, ಕೇಂದ್ರ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಪರಿಹಾರ ಬಿಡುಗಡೆ ಮಾಡಿದೆ ಎಂದರು.ರೈತರಿಗೆ ಅನ್ಯಾಯ ಆಗುತ್ತಿದೆ ಅಂತಾ ದೆಹಲಿಯಲ್ಲಿ ಎಲ್ಲರೂ ಹೋಗಿ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇವೆ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ತೀವ್ರ ಅನ್ಯಾಯ ಮಾಡುತ್ತಿದೆ. ಇನ್ನಾದರೂ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಬೇಕು ಅಂತಾ ಆಗ್ರಹ ಮಾಡುತ್ತೇನೆ ಎಂದರು.