ಕಾಲ್ತುಳಿತ: ಸಿಎಂ, ಡಿಸಿಎಂ ರಾಜೀನಾಮೆಗೆ ಒತ್ತಾಯ

KannadaprabhaNewsNetwork |  
Published : Jun 17, 2025, 02:19 AM ISTUpdated : Jun 17, 2025, 12:58 PM IST
ಸಿಕೆಬಿ-1   ಆರ್ ಸಿಬಿ 11 ಜನರ ಸಾವಿಗೆ ಕಾರಣರಾದ ಸಿಎಂ.ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು | Kannada Prabha

ಸಾರಾಂಶ

ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆ -ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ

 ಚಿಕ್ಕಬಳ್ಳಾಪುರ :  ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆಯಲ್ಲಿ 11 ಜನರ ಸಾವಿಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಯಾವುದೇ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಪೊಲೀಸ್ ಇಲಾಖೆಯ ಎಚ್ಚರಿಕೆಯನ್ನು ಕಡೆಗಣಿಸಿ ಸರ್ಕಾರ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಲು ಅವಕಾಶ ಕಲ್ಪಿಸಿ 11 ಅಭಿಮಾನಿಗಳ ಬಲಿ ಪಡೆದಿದೆ. ಆದ್ದರಿಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ವೈಫಲ್ಯ ಮರೆಮಾಚಲು ಅಮಾನತು

ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಭದ್ರತಾ ವೈಫಲ್ಯದ ಹೆಸರಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ದುರ್ಘಟನೆ ರಾಜ್ಯದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಕಾಲ್ತುಳಿತ ದುರ್ಘಟನೆ ಮರೆಮಾಚಲು ಮತ್ತೊಮ್ಮೆ ಜಾತಿಗಣತಿ ಮಾಡಲು ಸರ್ಕಾರ ನಿರ್ಧರಿಸಿದೆ. ಹಿಂದಿನ ಗಣತಿಗೆ 167 ಕೋಟಿ ರು. ವೆಚ್ಚವಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಬೇಕು ಎಂದು ಆರ್‌ಸಿಬಿ ತಂಡದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಆದರೆ ಡಿಪಿಎಆರ್‌ ಕಾರ್ಯದರ್ಶಿಗಳು ‘ಎಲ್ಲರೂ ಚಿನ್ನಸ್ವಾಮಿ ಸ್ಟೇಡಿಯಂಗೆ ಬರಬೇಕು’ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರೂ ಇದೇ ಹೇಳಿಕೆ ನೀಡಿದ್ದಾರೆ. ಇವರಿಬ್ಬರನ್ನೂ ಏಕೆ ಬಂಧಿಸಿಲ್ಲ. ಎಲ್ಲರಿಗೂ ಕಾನೂನು ಒಂದೇ ಅಲ್ಲವೇ ಎಂದು ಪ್ರಶ್ನಿಸಿದರು.

ಹೆಸರಿಗಷ್ಟೇ ಗೃಹ ಸಚಿವ

ಹೆಸರಿಗಷ್ಟೇ ಡಾ.ಪರಮೇಶ್ವರ್ ಗೃಹ ಮಂತ್ರಿಗಳಾಗಿದ್ದಾರೆ, ಅವರ ಹೆಸರಲ್ಲಿ ಮುಖ್ಯಮಂತ್ರಿಗಳು ಅಧಿಕಾರ ಚಲಾಯಿಸುತ್ತಿದ್ದಾರೆ. ಆದರೆ ಡಾ.ಪರಮೇಶ್ವರ್ ರಿಗೆ ಅಧಿಕಾರ ಕೊಟ್ಟರೆ ತಾನೇ ಅವರು ಕಾರ್ಯನಿರ್ವಹಿಸಲು ಸಾಧ್ಯ. ಒಬ್ಬ ಅನುಭವಿ ಹಾಗೂ ಕಾರ್ಯದಕ್ಷತೆ ಇರುವ ಪರಮೇಶ್ವರ್ ರಿಗೆ ಸಂಪೂರ್ಣವಾಗಿ ಅವರ ಖಾತೆಯ ಅಧಿಕಾರ ನಿರ್ವಹಿಸಲು ಬಿಟ್ಟಿದ್ದರೆ ಮತ್ತು ಚಿನ್ನಸ್ವಾಮಿ ಸ್ಠೇಡಿಯಂ ಬಳಿ ಜನ ಸೇರಿದಾಗ ಅವರನ್ನು ಸ್ಟೇಡಿಯಂ ಒಳಗೆ ಬಿಟ್ಟಿದ್ದರೆ ಎಲ್ಲ ಅಭಿಮಾನಿಗಳು ಕುಳಿತು ಮತ್ತು ನಿಂತುಕೊಂಡು ತಮ್ಮ ನೆಚ್ಚಿನ ಕ್ರಿಕೇಟ್ ಆಟಗಾರರನ್ನು ನೋಡಿ ತೆರಳುತ್ತಿದ್ದರು. ಆಗ ಈ ಅನಾಹುತವಾಗಿ 11 ಜನ ಸಾಯುತ್ತಿರಲಿಲ್ಲಾ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿ,ಹೆಣದ ಮೇಲೆ ರಾಜಕೀಯವೆಂದು ಟೀಕಿಸುವ ಕಾಂಗ್ರೆಸ್ಸಿಗರಿಗೆ ತಪ್ಪಿನ ಅರಿವಾಗಿದೆ. ಪಶ್ಚಾತ್ತಾಪ ಪಡುವ ಬದಲು ಪೊಲೀಸರ ಮೇಲೆ, ನಂತರ ಕೆಎಸ್‌‍ಸಿಎ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ, ಮಲ್ಯ ಮದ್ಯದ ಪ್ರಚಾರಕ್ಕಾಗಿ ತಂಡಕ್ಕೆ ಆರ್‌ಸಿಬಿ ಎಂದು ಹೆಸರಿಟ್ಟಿದ್ದರು. ಈಗ ಸಿಎಂ, ಡಿಸಿಎಂಗಳೇ ಹೊಸ ರಾಯಭಾರಿಗಳಾಗಿದ್ದಾರೆ ಎಂದು ಟೀಕಿಸಿದರು.

ಜನ ಸತ್ತಿದ್ದರೂ ನಿಲ್ಲದ ಸಮಾರಂಭ

ಕ್ರಿಕೆಟ್‌ ಅಭಿಮಾನಿಗಳು ಮೃತಪಟ್ಟಿದ್ದಾರೆಂಬ ಮಾಹಿತಿ ಇದ್ದರೂ, ಕಾರ್ಯಕ್ರಮ ಮುಂದುವರೆಸಿದ್ದು, ಟ್ರೋಫಿಗೆ ಮುತ್ತಿಟ್ಟಿದ್ದು, ನಂತರ ಕೆಎಸ್‌‍ಸಿಎಯಲ್ಲಿ ಒಂದು ಕೋಟಿ ರೂ. ಪಟಾಕಿ ಸಿಡಿಸಿದ್ದನ್ನು ನೋಡಿದರೆ, ಮಾನವೀಯತೆ ಅಧೋಗತಿಗೆ ಇಳಿದಿದೆ ಎಂಬುದು ಗೊತ್ತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ,ಸರ್ಕಾರದ ಕುತ್ತಿಗೆಗೆ ಬರುತ್ತಿದ್ದಂತೆಯೇ ಕೆಎಸ್‌‍ಸಿಎ ಬಲಿಪಶು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಡಿಕೆಶಿ ಅವರು ತೆರಿಗೆ ಮತ್ತು ಜಾಹೀರಾತು ಬಾಕಿ ನೆಪದಲ್ಲಿ ಕೆಎಸ್‌‍ಸಿಎ ವಿರುದ್ಧ ಬೊಟ್ಟು ಮಾಡಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ನಿರ್ಗಮಿತ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ,ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ನಿರ್ಮಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್.ಮುರಳೀಧರ್, ಕೆ.ಬಿ.ಮುರಳಿ,ಮಧು ಸೂಧನ ನಾರಾಯಣ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ,ಅನು ಆನಂದ್, ಪ್ರೇಮಲೀಲಾ, ಕಲಾವತಿ ಮತ್ತಿತರರು ಇದ್ದರು.

PREV
Read more Articles on

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ