ಕನ್ನಡ ಪ್ರಭ ವಾರ್ತೆ ಮುಧೋಳ
ಪ್ರಸಕ್ತ ಹಂಗಾಮಿಗೆ ತಾಲೂಕಿನ ರೈತರ ಸಹಕಾರಿ ರನ್ನ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಿ ತಾಲೂಕಿನ ರೈತರು ಸರ್ಕಾರವನ್ನು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಹಸೀಲ್ದಾರ್ ಕಚೇರಿಯಲ್ಲಿ ರೈತರ ಸಭೆ ನಡೆಸಿ ಅಭಿಪ್ರಾಯ ಪಡೆದರು.ಸಭೆಯಲ್ಲಿ ಮಾತನಾಡಿದ ಸಚಿವ ಆರ್.ಬಿ. ತಿಮ್ಮಾಪುರ, ಸಕ್ಕರೆ ಕಾರ್ಖಾನೆ ಪುನರಾರಂಭಗೊಳಿಸಲು ರೈತ ಮುಖಂಡರ ಜೊತೆ ಸೇರಿ ಮುಖ್ಯಮಂತ್ರಿ, ಸಕ್ಕರೆ ಸಚಿವರನ್ನು ಭೇಟಿ ಮಾಡಿ ಸಚಿವ ಸಂಪುಟದಲ್ಲಿ ಚರ್ಚಿಸಿದಾಗ, ಕಾರ್ಖಾನೆಯನ್ನು ಲೀಜ್ ಗೆ ಕೊಡಲು ಮತ್ತು ₹ 40 ಕೋಟಿ ಬ್ಯಾಂಕ್ ಸಾಲಕ್ಕೆ ಸರ್ಕಾರ ಗ್ಯಾರಂಟಿ ಕೊಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಜು.4 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಾರ್ಖಾನೆ ಪುನರಾರಂಭಗೊಳಿಸಲು ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಸಮಗ್ರವಾಗಿ ಚರ್ಚಿಸಿ ನಿಮಗೆ ಮಾಹಿತಿ ನೀಡುವುದಾಗಿ ಹೇಳಿದರು.ಕಾರ್ಖಾನೆ ಮತ್ತೆ ಆರಂಭಗೊಳ್ಳಬೇಕು ಎಂಬುದು ನನ್ನ ಮುಖ್ಯ ಉದ್ದೇಶವಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕಾರ್ಖಾನೆ ಆರಂಭಿಸುವುದರ ಕುರಿತು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದ ಸಚಿವರು, ಅಲ್ಲಿಯವರೆಗೆ ತಾವು ನಡೆಸುತ್ತಿರುವ ಹೋರಾಟ ನಿಲ್ಲಿಸುವಂತೆ ಮನವಿ ಮಾಡಿದಾಗ ಹೋರಾಟಗಾರರು ಸಚಿವರ ಮಾತಿಗೆ ಗೌರವ ನೀಡಿ ತಮ್ಮ ಹೋರಾಟವನ್ನು ತಾತ್ಕಾಲಿಕ ಹಿಂಪಡೆಯುವುದಾಗಿ ತಿಳಿಸಿದರು.
ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಸುಭಾಷ ಶಿರಬೂರ, ಈರಪ್ಪ ಹಂಚಿನಾಳ, ಯಲ್ಲಪ್ಪ ಹೆಗಡೆ, ವೆಂಕಣ್ಣ ಗಿಡಪ್ಪನವರ, ಉದಯಕುಮಾರ ಸಾರವಾಡ, ನಾರಾಯಣ ಹವಾಲ್ದಾರ, ರಾಜು ಯಡಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಯಾವುದೇ ಕಾರಣಕ್ಕೂ ಪ್ರಸಕ್ತ ಸಾಲಿಗೆ ಕಾರ್ಖಾನೆ ಪುನರಾರಂಭಗೊಳಿಸಲು ತಾವು ಬದ್ಧ ಇರುವುದಾಗಿ ರೈತರಿಗೆ ಭರವಸೆ ನೀಡಿದ ಸಚಿವ ತಿಮ್ಮಾಪುರ, ನಾನೂ ಸಹ ರೈತನಾಗಿದ್ದು, ರೈತರ ಸಮಸ್ಯೆಗಳು ಏನು ಎಂಬುದು ನನಗೂಗೊತ್ತಿದೆ. ಹೀಗಾಗಿ ಯಾವತ್ತಿಗೂ ರೈತರ ಪರವಾಗಿ ಇರುತ್ತೇನೆ.
- ಆರ್.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ