ಮಂಡ್ಯ ತಾಲೂಕು ಬಸರಾಳು ಸಮೀಪದ ಮುದ್ದನಘಟ್ಟ ಗ್ರಾಮದಲ್ಲಿ ಆಟೋಮೋಟೀವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಪರೀಕ್ಷಾ ಕೇಂದ್ರ ಸ್ಥಾಪನೆಗೆ ಗುರುತಿಸಲಾಗಿರುವ ಜಾಗದಲ್ಲಿ ಸುಮಾರು ೫೦ಕ್ಕೂ ಹೆಚ್ಚು ರೈತರು ವ್ಯವಸಾಯ ಚಟುವಟಿಕೆ ಮಾಡಿಕೊಂಡಿದ್ದು, ಭೂಮಿ ನೀಡುವುದಕ್ಕೆ ಇದೀಗ ಹಿಂದೇಟು ಹಾಕುತ್ತಿರುವುದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾದಂತಾಗಿದೆ.
- ಸರ್ವೆ ನಂ.೪೮ರ ಜಮೀನಿನ ಅನುಭವದಲ್ಲಿ ೫೦ಕ್ಕೂ ಹೆಚ್ಚು ರೈತರು
- ಭೂಮಿ ಮಂಜೂರು ಮಾಡಿಕೊಡುವಂತೆ ಸ್ಥಳೀಯರಿಂದ ಬಿಗಿಪಟ್ಟು
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕು ಬಸರಾಳು ಸಮೀಪದ ಮುದ್ದನಘಟ್ಟ ಗ್ರಾಮದಲ್ಲಿ ಆಟೋಮೋಟೀವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಪರೀಕ್ಷಾ ಕೇಂದ್ರ ಸ್ಥಾಪನೆಗೆ ಗುರುತಿಸಲಾಗಿರುವ ಜಾಗದಲ್ಲಿ ಸುಮಾರು ೫೦ಕ್ಕೂ ಹೆಚ್ಚು ರೈತರು ವ್ಯವಸಾಯ ಚಟುವಟಿಕೆ ಮಾಡಿಕೊಂಡಿದ್ದು, ಭೂಮಿ ನೀಡುವುದಕ್ಕೆ ಇದೀಗ ಹಿಂದೇಟು ಹಾಕುತ್ತಿರುವುದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾದಂತಾಗಿದೆ.
ಮುದ್ದನಘಟ್ಟ ಗ್ರಾಮದ ಸರ್ವೆ ನಂ. ೪೮ರ ಜಮೀನಿನಲ್ಲಿ ರೈತರು ೪೦-೫೦ ವರ್ಷದಿಂದ ವ್ಯವಸಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಏಕಾಏಕಿ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಜಮೀನು ವಶಪಡಿಸಿಕೊಂಡರೆ ನಮ್ಮ ಜೀವನದ ಗತಿ ಏನು. ನಮಗೆ ಜಮೀನು ಮಂಜೂರು ಮಾಡಿ ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಆ ಜಾಗದಲ್ಲಿರುವ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮುದ್ದನಘಟ್ಟ ಹಾಗೂ ಹೆಗ್ಗಡತಿಹಳ್ಳಿಯಲ್ಲಿ ೧೦೫ ಎಕರೆ ಗೋಮಾಳ ಜಮೀನು ಗುರುತಿಸಿದ ಜಿಲ್ಲಾಡಳಿತ ಆ ಜಾಗದಲ್ಲಿರುವ ಪರಿಸ್ಥಿತಿ ಪರಾಮರ್ಶೆ ನಡೆಸಿಲ್ಲವೆಂಬಂತೆ ಕಂಡುಬರುತ್ತಿದೆ. ಈ ಪ್ರದೇಶ ಖಾಲಿ ಇಲ್ಲ. ಇಲ್ಲಿ ಸುಮಾರು ೫೦ಕ್ಕೂ ಹೆಚ್ಚು ರೈತರು ವ್ಯವಸಾಯ ಮಾಡಿಕೊಂಡಿರುವುದು ಇದೀಗ ಗೊತ್ತಾಗಿದೆ. ಅಲ್ಲದೆ, ಈ ಜಮೀನು ಹಲವರ ಹೆಸರಿಗೆ ಖಾತೆಯಾಗಿರುವುದೂ ಕಂಡುಬಂದಿದೆ. ಇದು ಜಿಲ್ಲಾಡಳಿತಕ್ಕೆ ಹೊಸ ತಲೆನೋವಾಗಿ ಪರಿಗಣಿಸಿದೆ.
ಸರ್ವೆ ನಂ. ೪೮ರಲ್ಲಿ ಅನುಭವದಲ್ಲಿರುವ ರೈತರು ೧೯೯೧-೯೨ನೇ ಸಾಲಿನಿಂದ ೨೦೨೩-೨೪ನೇ ಸಾಲಿನವರೆಗೆ ರಾಜ್ಯಸರ್ಕಾರಕ್ಕೆ ನಿರಂತರವಾಗಿ ಅರ್ಜಿ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಸುಮಾರು ೪೦-೫೦ ವರ್ಷದಿಂದ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೂ ಇದುವರೆಗೂ ನಮಗೆ ಜಮೀನು ಮಂಜೂರು ಮಾಡಿಲ್ಲ ಎಂದು ಸ್ಥಳೀಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ಜಿಲ್ಲಾಡಳಿತ ನಮ್ಮ ಜೀವನಕ್ಕೆ ಆಧಾರವಾಗಿರುವ ಜಮೀನನ್ನು ಕೈಗಾರಿಕೆ ಸ್ಥಾಪನೆಗೆ ಮಂಜೂರು ಮಾಡಲು ಏಕಾಏಕಿ ಮುಂದಾಗಿದೆ. ಇದರ ಬಗ್ಗೆ ಸ್ಥಳೀಯ ರೈತರಿಂದ ಯಾವುದೇ ಅಭಿಪ್ರಾಯ ಸಂಗ್ರಹಿಸದೆ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಜಮೀನಿನಲ್ಲಿ ಅನುಭವದಲ್ಲಿರುವವರ ಆತಂಕಕ್ಕೆ ಕಾರಣವಾಗಿದೆ.
ಸರ್ವೆ ನಂ. ೪೮ರಲ್ಲಿ ಒಟ್ಟು ೧೭೩.೧೧ ಎಕರೆ ಜಮೀನಿದ್ದು, ೧೨೩.೫೪ ಎಕರೆ ಕಂದಾಯ ಭೂಮಿ ಇದೆ. ಇದರಲ್ಲಿ ಗೋಮಾಳ ೧೧೪.೧೧ ಎಕರೆ ಇದೆ. ಹಲವು ದಶಕಗಳ ಹಿಂದೆ ೫೦-೫೩ರಡಿ ಜಮೀನಿಗೆ ಅರ್ಜಿ ಸಲ್ಲಿಸಿದ್ದು, ಜಮೀನನ್ನು ಗ್ರಾಮದ ರೈತರಿಗೆ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲು ತಲಾ ೨೦ ಗುಂಟೆ ಜಮೀನನ್ನು ನೀಡಲಾಗಿತ್ತು. ನಂತರದಲ್ಲಿ ಖಾತೆ ಮಾಡಿಕೊಟ್ಟಿರಲಿಲ್ಲ. ಕಾಲಾನಂತರದಲ್ಲಿ ಕೆಲವರು ೨೦ ಗುಂಟೆಯಿಂದ ೨ ಎಕರೆಯವರೆಗೂ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಳೆಯಾಶ್ರಿತ ಪ್ರದೇಶವಾದ ಇಲ್ಲಿ ರೈತರು ಬೋರ್‌ವೆಲ್ ಕೊರೆಸಿಕೊಂಡಿದ್ದಾರೆ. ರಾಗಿ, ಹುರುಳಿ, ತೆಂಗು, ಅಡಿಕೆ, ಎಳ್ಳು ಇನ್ನಿತರ ಬೆಳೆ ಬೆಳೆಯುತ್ತಿದ್ದಾರೆ. ಈ ಜಮೀನು ಅನುಭವದಲ್ಲಿರುವವರು ಬಡವರು ಹಾಗೂ ಪರಿಶಿಷ್ಟರು. ಸರ್ಕಾರ ಈಗ ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ದಿಢೀರನೆ ಜಮೀನನ್ನು ಕಿತ್ತುಕೊಳ್ಳುವುದಕ್ಕೆ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ಈ ರೀತಿ ತೊಂದರೆ ನೀಡುವ ಬದಲು ವಿಷ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ರೈತರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಗೋಮಾಳ ಜಮೀನಿನಲ್ಲಿ ಯಾರ್ಯಾರು ಅನುಭವದಲ್ಲಿರುವ ದಾಖಲೆಗಳನ್ನು ಹೊಂದಿರುವರೋ ಅವರನ್ನು ಹೊರತುಪಡಿಸಿ ಉಳಿದವರ ಜಮೀನು ವಶಪಡಿಸಿಕೊಳ್ಳಲಾಗುವುದು. ದಾಖಲೆಗಳಿರುವ ಜನರನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವುದಿಲ್ಲವೆಂದು ಧೈರ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಸುಮಾರು ೨೫-೩೦ ರೈತರ ಬಳಿ ಜಮೀನಿನ ದಾಖಲೆಗಳಿವೆ ಎನ್ನಲಾಗುತ್ತಿದ್ದು, ಉಳಿದವರು ವ್ಯವಸಾಯವನ್ನಷ್ಟೇ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೆ, ದಾಖಲೆ ಹೊಂದಿರುವ ರೈತರ ಜಮೀನು ಮಧ್ಯ-ಮಧ್ಯದಲ್ಲಿ ಸೇರಿಕೊಂಡಿರುವುದರಿಂದ ಅವರನ್ನು ಕೈಬಿಡುವುದು ಸುಲಭವಾಗಿಲ್ಲ. ಏನೇ ಆದರೂ ಪೂರ್ಣ ಪ್ರಮಾಣದಲ್ಲಿ ಜಮೀನನ್ನು ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಪರಿಹಾರ ಕೊಟ್ಟು ಪರೀಕ್ಷಾ ಕೇಂದ್ರ ಸ್ಥಾಪನೆ ಯೋಜನೆ ಕೈಗೊಳ್ಳಬೇಕು. ಇಲ್ಲದಿದ್ದರೆ ಪರ್ಯಾಯ ಜಾಗ ಹುಡುಕುವುದು ಅನಿವಾರ್ಯವಾಗಲಿದೆ.
ರೈತರಿಗೆ ನೀಡಲಾಗಿರುವ ಜಮೀನುಗಳನ್ನು ರೈತರಿಗೆ ಬಿಡಿ. ಇಲ್ಲವೇ ನಮ್ಮಗಳ ಹೆಸರಿಗೆ ಮಂಜೂರು ಮಾಡಿಕೊಟ್ಟು ಸುಗಮವಾಗಿ ಜೀವನ ನಡೆಸುವುದಕ್ಕೆ ಅನುವು ಮಾಡಿಕೊಡಲಿ. ಅದೂ ಆಗದಿದ್ದರೆ ನಮಗೆ ಸೂಕ್ತ ಜಾಗದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಅನೇಕ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ-----------------------------
ಹಲವು ದಶಕಗಳಿಂದ ಮುದ್ದನಘಟ್ಟ ಗ್ರಾಮದ ಸರ್ವೆ ನಂ. ೪೮ರಲ್ಲಿ ಉಳುಮೆ ಮಾಡಿಕೊಂಡು ವ್ಯವಸಾಯ ಮಾಡಿಕೊಂಡಿದ್ದೇವೆ. ರಾಗಿ, ಹುರುಳಿ, ತೆಂಗು, ಅಡಿಕೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದೇವೆ. ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ನಮ್ಮ ಜಮೀನನ್ನು ಗುರುತಿಸಿರುವುದೂ ಗೊತ್ತಿಲ್ಲ, ಆ ಬಗ್ಗೆ ನಮ್ಮ ಅಭಿಪ್ರಾಯವನ್ನೂ ಸಂಗ್ರಹಿಸಿಲ್ಲ. ಏಕಾಏಕಿ ವಶಪಡಿಸಿಕೊಂಡರೆ ನಮ್ಮ ಜೀವನ ಬೀದಿಪಾಲಾಗಲಿದೆ.- ರವಿ, ರೈತ, ಮುದ್ದನಘಟ್ಟ----------------------------------ನಾವು ೫೦ ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಹಲವಾರು ಬೆಳೆಗಳನ್ನು ಬೆಳೆದುಕೊಂಡು ಬಂದಿದ್ದೇವೆ. ಗೋಮಾಳ ಜಮೀನನ್ನು ಅಭಿವೃದ್ಧಿಪಡಿಸಿ. ನಂತರ ನಿಮ್ಮ ಹೆಸರಿಗೆ ಖಾತೆ ಮಾಡಿಕೊಡುವುದಾಗಿ ಹೇಳಿದ್ದರು. ಅದರಂತೆ ಕಷ್ಟಪಟ್ಟು ವ್ಯವಸಾಯ ಮಾಡಿ ಅಭಿವೃದ್ಧಿಪಡಿಸಿದ್ದೇವೆ. ಕೇಂದ್ರ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗಲೇ ನಮಗೆ ವಿಷಯ ಗೊತ್ತಾಗಿದ್ದು. ಅಲ್ಲಿಯವರೆಗೂ ನಮಗೆ ಗೊತ್ತಿರಲಿಲ್ಲ.- ರಾಮಚಂದ್ರು, ರೈತ, ಮುದ್ದನಘಟ್ಟ-----------------------------------ನಾವು ಸರ್ಕಾರಿ ಜಮೀನನ್ನು ಮಾತ್ರ ಯೋಜನೆಗೆ ಪಡೆದುಕೊಳ್ಳುತ್ತಿದ್ದೇವೆ. ಖಾತೆಯಲ್ಲಿರುವವರ ಜಮೀನುಗಳನ್ನು ನಾವು ಪಡೆದುಕೊಳ್ಳುತ್ತಿಲ್ಲ. ಸರ್ಕಾರಿ ಭೂಮಿಯನ್ನು ಸರ್ಕಾರದ ಉದ್ದೇಶಿತ ಯೋಜನೆಗೆ ಬಳಸಿಕೊಳ್ಳುತ್ತಿದ್ದೇವೆ. ಯಾರಿಂದಲೂ ಬಲವಂತವಾಗಿ ಜಮೀನನ್ನು ಕಸಿದುಕೊಳ್ಳುತ್ತಿಲ್ಲ.- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
೨ಕೆಎಂಎನ್‌ಡಿ-೧
ಮಂಡ್ಯ ತಾಲೂಕು ಮುದ್ದನಘಟ್ಟ ಗ್ರಾಮದಲ್ಲಿರುವ ಸರ್ವೆ ನಂ.೪೮ರ ದಾಖಲೆಗಳಲ್ಲಿರುವಂತೆ ರೈತರ ಜಮೀನುಗಳ ವಿವರ.೨ಎಂಎನ್‌ಡಿ-೨
ಜಮೀನುಗಳಲ್ಲಿ ಅನುಭವದಲ್ಲಿರುವ ರೈತರು ಜಮೀನು ವಶಪಡಿಸಿಕೊಳ್ಳದಂತೆ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.