-ಕೋಟೆ ನಾಡು ವಾಯುವಿಹಾರಿ ಸಂಘದ ಅಧ್ಯಕ್ಷ ಆರ್.ಸತ್ಯಣ್ಣನಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಿಂದ ಬೀದರ್ ನ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರದುರ್ಗದ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಅವರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷರಾಗಿ ಹತ್ತಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಆರ್.ಸತ್ಯಣ್ಣ ಕೋಟೆಗೆ ಬರುವ ಪ್ರವಾಸಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿವ ನೀರು, ಶೌಚಾಲಯಕ್ಕಾಗಿ ಅನೇಕ ಬಾರಿ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿ ರಾಜ್ಯ ಹಾಗೂ ಕೇಂದ್ರ ಮಂತ್ರಿಗಳ ಮೇಲೆ ಒತ್ತಡ ಹೇರಿದ್ದರು.
ಕೋಟೆಯೊಳಗಿರುವ ನವಿಲುಗಳಿಗೆ ದಿನವೂ ಆಹಾರ ಧಾನ್ಯ ಪೂರೈಸಿಕೊಂಡು ಬರುತ್ತಿರುವುದಲ್ಲದೆ ಅನೇಕ ಸಮಾಜಮುಖಿ ಕಾರ್ಯ ನಡೆಸುತ್ತಿರುವ ಸತ್ಯಣ್ಣ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕಾಯಕ ಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಿತು.ರಾಜ್ಯದ 34 ಜಿಲ್ಲೆಗಳಿಂದಲೂ ಒಬ್ಬೊಬ್ಬ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿದೆ.
ಅನುಭವ ಮಂಟಪ ಬಸವ ಕಲ್ಯಾಣದ ನಾಡೋಜ ಡಾ.ಬಸವಲಿಂಗ ಪಟ್ಟ ದೇವರು, ಬೆಲ್ದಾಳದ ಸಿದ್ದರಾಮ ಶರಣರು ಸಾನಿಧ್ಯ ವಹಿಸಿದ್ದರು.ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಮ್, ಬೇರೆ ಬೇರೆ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಾಸಕರು, ವಿಧಾನಪರಿಷತ್ ಸದಸ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದ್ದರು.
-----ಫೋಟೋ: ಚಿತ್ರದುರ್ಗದ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣನಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.