18ರಂದು ಹಮಾಲಿ ಕಾರ್ಮಿಕರ ರಾಜ್ಯ ಸಮಾವೇಶ :ಕಾರ್ಮಿಕರ ಸಂಘದ ಕಚೇರಿಯಲ್ಲಿ ಭಿತ್ತಿಪತ್ರ ಬಿಡುಗಡೆ

KannadaprabhaNewsNetwork | Updated : Aug 12 2024, 07:53 AM IST

ಸಾರಾಂಶ

ರಾಜ್ಯ ಸಮಾವೇಶದ ಪ್ರಚಾರದ ಭಿತ್ತಿ ಪತ್ರವನ್ನು ಕಾರ್ಮಿಕರ ಸಂಘದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಸಮಾವೇಶದಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷರು ತಿಳಿಸಿದರು.

 ಮಡಿಕೇರಿ :  ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ತಲೆಹೊರೆ ಕಾರ್ಮಿಕರ ಸಂಘ ಆ.18ರಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ನಡೆಸುತ್ತಿರುವ ರಾಜ್ಯ ಸಮಾವೇಶದ ಪ್ರಚಾರದ ಭಿತ್ತಿಪತ್ರವನ್ನು ಭಾನುವಾರ ನೆಲ್ಲಿಹುದಿಕೇರಿಯ ಕಟ್ಟಡ ಕಾರ್ಮಿಕರ ಸಂಘದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಹಮಾಲಿ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರು, ಸಿರಗುಪ್ಪದ ಎಪಿಎಂಸಿ ಆವರಣದಲ್ಲಿ ನಡೆಯುವ ಸಮಾವೇಶದಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನಿಗಧಿ ಪಡಿಸಿರುವ ಕನಿಷ್ಠ ವೇತನ ನೀಡಬೇಕು, ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು, ಕೆಲಸದ ಭದ್ರತೆ ಮತ್ತು ಸುರಕ್ಷತೆ ನೀಡಬೇಕು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸಬೇಕು, ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಕಾಯಕಲ್ಪ ನೀಡಬೇಕು, ಪ್ರಧಾನಮಂತ್ರಿ ಜೀವವಿಮಾ ಯೋಜನೆ ಮತ್ತು ಪಿಂಚಣಿಯ ಶ್ರಮಯೋಗಿ ಯೋಜನೆಯ ಸೌಲಭ್ಯ ಎಲ್ಲಾ ಕಾರ್ಮಿಕರಿಗೆ ಸಿಗಬೇಕು, ಕೆಲಸದ ಸ್ಥಳದಲ್ಲಿ ಸುರಕ್ಷತಾ ಕಿಟ್ ಗಳನ್ನು ನೀಡಬೇಕು, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಸರ್ಕಾರದ ವಸತಿ ಯೋಜನೆಯಲ್ಲಿ ಹಮಾಲಿ ಕಾರ್ಮಿಕರಿಗೆ ಆದ್ಯತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಕಾರ್ಮಿಕ ಸಚಿವರು, ಕಾರ್ಮಿಕ ಅಧಿಕಾರಿಗಳು ಪಾಲ್ಗೊಳ್ಳುವ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.

ಭಿತ್ತಿಪತ್ರ ಬಿಡುಗಡೆ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಶಾಜಿ ರಮೇಶ್, ಜಿಲ್ಲಾ ಪದಾಧಿಕಾರಿಗಳಾದ ಅಯ್ಯ, ಮಾಲಿಕ್ ಸಾಬ್, ಟಿ.ಎ. ಅಲಿ, ರಾಜನ್, ಸುಹಿಲ್ ಮತ್ತಿತರರು ಉಪಸ್ಥಿತರಿದ್ದರು.

Share this article