ರಾಜ್ಯ ಸರ್ಕಾರ ಅಣತಿಯಂತೆ ಮೆಕ್ಕೆಜೋಳ ಖರೀದಿಸಿ: ಬಿ.ಎಂ.ಸತೀಶ

KannadaprabhaNewsNetwork |  
Published : Jan 24, 2026, 02:30 AM IST
23ಕೆಡಿವಿಜಿ1, 2-ದಾವಣಗೆರೆ ಎಪಿಎಂಸಿ ಪ್ರಾಂಗಣದಲ್ಲಿ ಮೆಕ್ಕೆಜೋಳ ಖರೀದಿುವಂತೆ ಮೆಕ್ಕೆಜೋಳ ತುಂಬಿದ್ದ ಟ್ರ್ಯಾಕ್ಟರ್‌ ಸಮೇತ ಪ್ರತಿಭಟಿಸುತ್ತಿರುವ ರೈತ ಮುಖಂಡರು, ರೈತರು. | Kannada Prabha

ಸಾರಾಂಶ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಸಿದ್ದರೂ ಖರೀದಿ ಪ್ರಕ್ರಿಯೆ ನಡೆಸದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ನೇತೃತ್ವದಲ್ಲಿ ಮೆಕ್ಕೆಜೋಳ ತುಂಬಿದ್ದ ಟ್ರ್ಯಾಕ್ಟರ್‌ಗಳ ಸಮೇತ ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಸಿದ್ದರೂ ಖರೀದಿ ಪ್ರಕ್ರಿಯೆ ನಡೆಸದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ನೇತೃತ್ವದಲ್ಲಿ ಮೆಕ್ಕೆಜೋಳ ತುಂಬಿದ್ದ ಟ್ರ್ಯಾಕ್ಟರ್‌ಗಳ ಸಮೇತ ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಎಪಿಎಂಸಿ ಪ್ರಾಂಗಣಕ್ಕೆ ಆವರಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಸಿದ್ದ ರೈತರು ಟ್ರ್ಯಾಕ್ಟರ್‌ನಲ್ಲಿ ಮೆಕ್ಕೆಜೋಳ ಲೋಡ್ ಮಾಡಿಕೊಂಡು ಇಲ್ಲಿನ ಎಪಿಎಂಸಿಗೆ ಬಂದಾಗ ಖರೀದಿ ಪ್ರಕ್ರಿಯೆ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ಮೆಕ್ಕೆಜೋಳ ತುಂಬಿದ್ದ ಟ್ರ್ಯಾಕ್ಟರ್ ಗಳ ಸಮೇತ ರೈತರು ಪ್ರತಿಭಟಿಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ.ಸತೀಶ, ಜಿಲ್ಲೆಯಲ್ಲಿ ಪಶು/ಕುಕ್ಕುಟ ಆಹಾರ ಉತ್ಪಾದನೆ ಘಟಕಗಳು ಶೇ.20ರಷ್ಟು ಮುಂಗಡ ಹಣ ಪಾವತಿಸಿ, 455 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕು. ಎಸ್.ಎಸ್.ಗಣೇಶ ಮಾಲಿಕತ್ವದ ಕುಕ್ಕುವಾಡ ಶುಗರ್ ಡಿಸ್ಟಿಲರಿಗೆ ಶೇ.50ರಷ್ಟು ಮುಂಗಡ ಹಣ ಪಾವತಿಸಿ, 729.5 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದರು.

ಪಶು/ಕುಕ್ಕುಟ ಆಹಾರ ಉತ್ಪಾದನೆ ಘಟಕಗಳು ಶೇ.20ರಷ್ಟು ಮುಂಗಡ ಹಣ ಪಾವತಿಸಿರುವುದರಿಂದ ರೈತರು ಅವರಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿಯಮಾನುಸಾರ ನೋಂದಣಿ ಮಾಡಿಸಿ, ಮೆಕ್ಕೆಜೋಳ ಟ್ರ್ಯಾಕ್ಟರ್‌ಗಳಲ್ಲಿ ಲೋಡ್ ಮಾಡಿಕೊಂಡು ಎಪಿಎಂಸಿ ಪ್ರಾಂಗಣಕ್ಕೆ ತಂದಿದ್ದಾರೆ. ಆದರೆ ಖರೀದಿ ಪ್ರಕ್ರಿಯೆ ನಡೆಸಬೇಕಾದ ಅಧಿಕಾರಿಗಳು, ಖರೀದಿಸಬೇಕಾದ ಪಶು/ಕುಕ್ಕುಟ ಆಹಾರ ಉತ್ಪಾದನೆ ಘಟಕಗಳ ಮಾಲೀಕರಿಲ್ಲದೇ ರೈತರು ರೊಚ್ಚಿಗೆದ್ದಿದ್ದಾರೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಡೆ ಇದಾಗಿದೆ. ಕುಕ್ಕವಾಡ ಶುಗರ್ ಡಿಸ್ಟಿಲರಿ ಮಾಲೀಕರಾಗ ಎಸ್ಸೆಸ್ ಗಣೇಶ ಇದುವರೆಗೂ ಶೇ.50ರಷ್ಟು ಮುಂಗಡ ಹಣವನ್ನೇ ಪಾವತಿಸಿಲ್ಲ. ಜಿಲ್ಲಾಡಳಿತ ತಕ್ಷಣ ಕಾರ್ಖಾನೆ ಆಡಳಿತ ಮಂಡಳಿಗೆ ನೋಟೀಸ್ ಜಾರಿ ಮಾಡಬೇಕು. ಸರ್ಕಾರದ ಆದೇಶ‍ವನ್ನೇ ಅಧಿಕಾರಿಗಳು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ಪಶು ಮತ್ತು ಕುಕ್ಕುಟೋದ್ಯಮದ ಆಹಾರ ಉತ್ಪಾದನಾ ಘಟಕದವರು ಪಾಲಿಸಲಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ಮೆಕ್ಕೆಜೋಳ ಖರೀದಿಸುವಂತೆ ರೈತರು ಕೆಲ ದಿನಗಳ ಹಿಂದೆ ನಿರಂತರ ಹೋರಾಟ ಮಾಡಿದ್ದ ಹಿನ್ನೆಲೆಯಲ್ಲಿ ಸರ್ಕಾರ ರೈತ ಸಂಘಟನೆಗಳು, ರೈತ ಮುಖಂಡರ ಸಭೆ ನಡೆಸಿ, ಮೆಕ್ಕೆಜೋಳ ಖರೀದಿಗೆ ಆದೇಶ ಹೊರಡಿಸಿದೆ. ಹೀಗಿದ್ದರೂ ನೋಂದಣಿ ಮಾಡಿಸಿದ ರೈತರಿಂದ ಮೆಕ್ಕೆಜೋಳ ಖರೀದಿಗೆ ತಾತ್ಸಾರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಟ್ರ್ಯಾಕ್ಟರ್ ಲೋಡ್ ಸಮೇತ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮಹೇಶ, ಎಪಿಎಂಸಿ ಉಪ ಕಾರ್ಯದರ್ಶಿ ಹರೀಶ ನಾಯ್ಕ ಬಂದು ರೈತರ ಅಹವಾಲು ಆಲಿಸಿದರು. ಇದೇ ವೇಳೆ ಮಾತನಾಡಿದ ಡಾ.ಮಹೇಶ, ಪಶು/ಕುಕ್ಕುಟ ಆಹಾರ ಉತ್ಪಾದನೆ ಘಟಕಗಳ ಮಾಲೀಕರನ್ನು ಸಂಪರ್ಕಿಸಿ ಸಂಜೆಯೊಳಗೆ ಟ್ರ್ಯಾಕ್ಟರ್‌ನಲ್ಲಿ ಲೋಡ್ ಮಾಡಿಕೊಂಡು ಬಂದಿರುವ ಎಲ್ಲಾ ರೈತರ ಮೆಕ್ಕೆಜೋಳ ಖರೀದಿಸುವಂತೆ ತಾಕೀತು ಮಾಡಿದರು. ಇದರಿಂದ ಸಮಾಧಾನಗೊಂಡ ರೈತರು ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದರು.

ರೈತ ಮುಖಂಡರಾದ ತುಂಬಿಗೆರೆ ದಿನೇಶ ಗೌಡ, ರೈತ ಸಂಘದ ಮುಖಂಡ ಬುಳ್ಳಾಪುರ ಹನುಮಂತಪ್ಪ, ಪವಾಡ ರಂಗವ್ವನಹಳ್ಳಿ ಮಲ್ಲೇಶಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ವಿಷಯಗಳ ಮುಂದಿಟ್ಟು ಫೆ.2ನೇ ವಾರ ಬೃಹತ್‌ ಪ್ರತಿಭಟನೆ: ಎಂ. ಗುರುಮೂರ್ತಿ ಮಾಹಿತಿ
ಸುಂಡಘಟ್ಟದಲ್ಲಿ ಬಸ್ ತಂಗುದಾಣ ಉದ್ಘಾಟನೆ