ಹೊನ್ನಾವರ: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಮೀನುಗಾರರ ಅಭ್ಯುದಯಕ್ಕಾಗಿ ಪರಿಶ್ರಮಿಸುತ್ತಿದೆ ಎಂದು ಕೆಪಿಸಿಸಿ ಮೀನುಗಾರ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಹೆಮ್ಮೆಯಿಂದ ನುಡಿದರು.
ಅವರು ಹೊನ್ನಾವರ ಪಟ್ಟಣದ ಸಾಗರ ರೆಸಿಡೆನ್ಸಿಯ ಸಭಾಭವನದಲ್ಲಿ ರಾಜ್ಯ ಕಾಂಗ್ರೆಸ್ ಮೀನುಗಾರ ವಿಭಾಗ ಏರ್ಪಡಿಸಿದ ಮೀನುಗಾರರೊಂದಿಗೆ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಯಾಂತ್ರಿಕ ಬೋಟ್‌ಗಳಿಗೆ ಅಧಿಕಾರಕ್ಕೆ ಬಂದ ತಕ್ಷಣ ೩೦೦ ಲೀಟರ್ ಡೀಸೆಲ್‌ಗೆ ಬದಲಾಗಿ ೫೦೦ ಲೀಟರ್ ನೀಡುತ್ತಿದೆ. ಮೀನುಗಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ₹೫೦ ಸಾವಿರದಿಂದ ₹೩ ಲಕ್ಷಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದು ಕಾಂಗ್ರೆಸ್ ಸಾಧನೆ ಎಂದರು.
ಮೀನುಗಾರರು ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ದುರ್ಘಟನೆಯಿಂದ ಮೃತಪಟ್ಟರೆ ಅಂತಹ ಕುಟುಂಬಗಳಿಗೆ ತಕ್ಷಣ ₹೧೦ ಲಕ್ಷ ಪರಿಹಾರ ನೀಡುತ್ತಿರುವುದು ಪಕ್ಷದ ಮೀನುಗಾರರ ಪರವಾಗಿರುವುದಕ್ಕೆ ಸಾಕ್ಷಿ ಎಂದು ಮಂಜುನಾಥ ಸುಣಗಾರ ನುಡಿದರು.ಕಾಸರಕೋಡಿನಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಹೊರಟಿರುವ ಖಾಸಗಿ ವಾಣಿಜ್ಯ ಬಂದರಿನ ಕುರಿತಂತೆ ಮಾತನಾಡಿ, ಸ್ಥಳೀಯ ಎಲ್ಲ ಮೀನುಗಾರ ಸಂಘಟನೆಗಳು ಒಗ್ಗಟ್ಟಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ನೀಡಲು ಬಯಸಿದರೆ ತಾವು ಮುಂದಾಗಿ ಮೀನುಗಾರರ ಜೊತೆಯಲ್ಲಿದ್ದು ಸಮಯ ನಿಗದಿ ಪಡಿಸುವ ಭರವಸೆ ನೀಡಿದರು.
ರಾಷ್ಟ್ರೀಯ ಮೀನುಗಾರ ಸಂಘಟನೆಯ ಪ್ರಮುಖರಾದ ಚಂದ್ರಕಾಂತ ಕೊಚರೇಕರ್ ಮಾತನಾಡಿ, ಕರಾವಳಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾರವಾರ, ಬೇಲೆಕೇರಿ, ಮಂಗಳೂರು ಬಂದರು ಮುಂದಿನ ನೂರಾರು ವರ್ಷಗಳ ಕಾಲ ರಾಜ್ಯದ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದ್ದರು. ಸರ್ಕಾರ ಕೇವಲ ಅಭಿವೃದ್ಧಿಯ ಹೆಸರಿನಲ್ಲಿ ಕರಾವಳಿಯ ಕಾಸರಕೋಡ ಮತ್ತು ಇತರ ಭಾಗಗಳಲ್ಲಿ ವಾಣಿಜ್ಯ ಬಂದರುಗಳನ್ನು ನಿರ್ಮಾಣ ಮಾಡಲು ಹೊರಟಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಮೀನುಗಾರರು ತಮ್ಮ ಬದುಕನ್ನು ಕಳೆದುಕೊಳ್ಳುವ ದಿನಗಳು ಬಂದಲ್ಲಿ ಆಶ್ಚರ್ಯವಿಲ್ಲ ಎಂದು ಎಚ್ಚರಿಕೆಯ ಮಾತುಗಳನ್ನು ಆಡಿದರು.ಮೀನುಗಾರ ಮುಖಂಡ ರಾಜು ತಾಂಡೆಲ್ ಮಾತನಾಡಿ, ಕಾಸರಕೋಡಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರಿನಿಂದ ಅನೇಕ ಸ್ಥಳೀಯ ಮೀನುಗಾರರು ತಮ್ಮ ಮನೆ, ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹವರ ಪರ ನಿಂತು ಹೋರಾಟ ನಡೆಸಿದರೆ ಸರ್ಕಾರ ವಿನಾಕಾರಣ ನಮ್ಮ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳಿಸುತ್ತಿರುವುದು ಘನಘೋರ ಅನ್ಯಾಯ ಎಂದು ಅಳಲು ತೋಡಿಕೊಂಡರು.
ರಾಜ್ಯಾಧ್ಯಕ್ಷರಾದ ತಾವು ಮಹಿಳೆಯರು ಮತ್ತು ಅಮಾಯಕರ ಮೇಲೆ ಪೊಲೀಸರು ಹಾಕಿರುವ ಮೊಕದ್ದಮೆ ಹಿಂಪಡೆಯಲು ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿದರು.ಇನ್ನೋರ್ವ ಮೀನುಗಾರ ಸಂಘಟನೆಯ ಪ್ರಮುಖರಾದ ರಾಜೇಶ ತಾಂಡೆಲ್ ಮಾತನಾಡಿ, ಕಾಸರಕೋಡ ವಾಣಿಜ್ಯ ಬಂದರಿನಿಂದ ಅನೇಕ ಬಡ ಕುಟುಂಬಗಳು ತಮ್ಮ ಸಾಂಪ್ರದಾಯಿಕ ಮೀನುಗಾರಿಕೆಯಿಂದ ವಂಚಿತರಾಗುತ್ತಿದ್ದು, ಅಂತಹ ಕುಟುಂಬಗಳಿಗೆ ಸರ್ಕಾರ ರಕ್ಷಣೆ ನೀಡಲು ಮುಂದಾಗುವಂತೆ ಆಗ್ರಹಿಸಿದರು.
ಕೆಪಿಸಿಸಿ ಮೀನುಗಾರ ವಿಭಾಗದ ಜಂಟಿ ಕಾರ್ಯದರ್ಶಿ ಅಭಿಷೇಕ್ ತಾಂಡೆಲ್, ಜಿಲ್ಲಾಧ್ಯಕ್ಷ ಪ್ರಕಾಶ ಜೈವಂತ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ, ಕುಮಟಾ ಪುರಸಭೆಯ ಮಾಜಿ ಸದಸ್ಯೆ, ಮೀನುಗಾರ ಮುಖಂಡರಾದ ಶ್ರೀಮತಿ ಅನಿತಾ ಮಾಫಾರಿ ಮಾತನಾಡಿದರು.ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಅವರನ್ನು ಸನ್ಮಾನಿಸಲಾಯಿತು.
ಬೆಳ್ಕೊಂಡ ಮೀನುಗಾರಿಕಾ ಸೊಸೈಟಿ ನಿರ್ದೇಶಕ ರವಿ ಮೊಗೇರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೇಶವ ಮೇಸ್ತ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮೇಸ್ತ, ಮಂಜುನಾಥ ಖಾರ್ವಿ ಇದ್ದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್.ತೆಂಗೇರಿ ಸ್ವಾಗತಿಸಿದರು. ಪಪಂ ಸದಸ್ಯ ಸುರೇಶ ಮೇಸ್ತ ವಂದಿಸಿದರು. ಕಾರ್ಯಕ್ರಮದ ನಂತರ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಪಟ್ಟಣದ ಉದ್ಯಮ ನಗರ, ಸುಣ್ಣದ ಗುಡ್ಡಾ, ಬೆಳಕೊಂಡ ಸೊಸೈಟಿಗಳಿಗೆ ತೆರಳಿ ಮೀನುಗಾರರ ಸಮಸ್ಯೆ ಆಲಿಸಿದರು.