ಬೆಂಗಳೂರಲ್ಲಿ ನಾಳೆ ರಾಜ್ಯ ಗ್ರಾಪಂ ಸದಸ್ಯರ ಧರಣಿ: ದೊಗ್ಗಳ್ಳಿ ವೀರೇಶ

KannadaprabhaNewsNetwork | Published : Feb 7, 2024 1:45 AM

ಸಾರಾಂಶ

ಗ್ರಾಪಂಗಳು ಸ್ವಯಂ ಆಡಳಿತ ಘಟಕಗಳಾಗಿ ಕೆಲಸ ಮಾಡಲು ಅವಶ್ಯಕ ಅಧಿಕಾರ ಮತ್ತು ಪ್ರಾಧಿಕಾರಗಳ ಪಂಚಾಯಿತಿಗಳಿಗೆ ನೀಡಬೇಕು. ಆದರೆ, ಸರ್ಕಾರವು ಸಂವಿಧಾನದ ಸೂಚನೆಯನ್ನೇ ಪಾಲಿಸುತ್ತಿಲ್ಲ. 1992ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳ ಸಂವಿಧಾನ ಬದ್ಧಗೊಳಿಸುವ ತನಕ ದೇಶದ ಬಹುತೇಕ ರಾಜ್ಯಗಳಲ್ಲಿ ಗ್ರಾಪಂಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂವಿಧಾನದ ಆಶಯದಂತೆ ಗ್ರಾಪಂಗಳು ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸಲು ಬಿಡಬೇಕೆಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದಿಂದ ಫೆ.8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಜಿಲ್ಲಾಧ್ಯಕ್ಷ, ದೊಡ್ಡಬಾತಿ ಗ್ರಾಪಂ ಸದಸ್ಯ ದೊಗ್ಗಳ್ಳಿ ವೀರೇಶ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ರಾಜ್ಯಮಟ್ಟದ ಹೋರಾಟದಲ್ಲಿ ರಾಜ್ಯದ ವಿವಿಧೆಡೆಯಿಂದ 25 ಸಾವಿರಕ್ಕೂ ಅಧಿಕ ಗ್ರಾಪಂ ಸದಸ್ಯರು ಭಾಗವಹಿಸಲಿದ್ದು, ಜಿಲ್ಲೆಯಿಂದ ಸುಮಾರು 1,500 ಮಂದಿ ಗ್ರಾಪಂ ಸದಸ್ಯರು ಒಕ್ಕೂಟದ ಜಿಲ್ಲಾ ಘಟಕದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದೇವೆ ಎಂದರು.

ಗ್ರಾಪಂಗಳು ಸ್ವಯಂ ಆಡಳಿತ ಘಟಕಗಳಾಗಿ ಕೆಲಸ ಮಾಡಲು ಅವಶ್ಯಕ ಅಧಿಕಾರ ಮತ್ತು ಪ್ರಾಧಿಕಾರಗಳ ಪಂಚಾಯಿತಿಗಳಿಗೆ ನೀಡಬೇಕು. ಆದರೆ, ಸರ್ಕಾರವು ಸಂವಿಧಾನದ ಸೂಚನೆಯನ್ನೇ ಪಾಲಿಸುತ್ತಿಲ್ಲ. 1992ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳ ಸಂವಿಧಾನ ಬದ್ಧಗೊಳಿಸುವ ತನಕ ದೇಶದ ಬಹುತೇಕ ರಾಜ್ಯಗಳಲ್ಲಿ ಗ್ರಾಪಂಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. 1992ರಲ್ಲಿ ತಿದ್ದುಪಡಿ ನಂತರವಷ್ಟೇ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದ್ದನ್ನು ಸರ್ಕಾರ ಮರೆಯಬಾರದು ಎಂದು ಹೇಳಿದರು.

ಸಂವಿಧಾನದ ಪ್ರಕರಣ 40 ಮತ್ತು 242 ಜಿ ಅನ್ವಯ ಗ್ರಾಪಂಗಳು ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸಬೇಕೆಂಬುದಾಗಿ ಹೇಳಿದೆ. ಆದರೂ ಸಂವಿಧಾನದ ಆಶಯ ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಇಂದಿಗೂ ಕೇವಲ ಕನಸಾಗಿಯೇ ಉಳಿದಿರುವುದು ವಿಪರ್ಯಾಸ. ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಬೆಳವಣಿಗೆಯು ಆಶಾದಾಯಕವಾಗಿದ್ದು, ದೇಶದಲ್ಲೇ ಕ್ರಾಂತಿಕಾರಕವಾದ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ರಚನೆಯಾಗಿದ್ದರೂ ಅಧಿನಿಯಮದ ಅನುಷ್ಠಾನ ಮಾತ್ರ ಅಗತ್ಯದ ಮಟ್ಟಿಗೆ ಆಗದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ಸದಸ್ಯರ ಒಕ್ಕೂಟದ ಬೇಡಿಕೆಗಳು:

ಗ್ರಾಪಂಗಳು ಸ್ವಯಂ ಸರ್ಕಾರವಾಗಿ ಕಾರ್ಯ ನಿರ್ವಹಿಸಲು ಜವಾಬ್ದಾರಿ ನಕ್ಷೆ ರಚಿಸಬೇಕು. ಅದರಲ್ಲಿ ಇರುವಂತೆ ಆಯಾ ಜವಾಬ್ದಾರಿಗೆ ಸಂಬಂಧಿಸಿದ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ, ಜವಾಬ್ಧಾರಿ ನಿರ್ವಹಿಸುವ ಸ್ವಾತಂತ್ರ್ಯವನ್ನು ಗ್ರಾಪಂಗಳಿಗೆ ವರ್ಗಾಯಿಸಬೇಕು. ನೇಮಕವಾಗಿರುವ ಅಥವಾ ವರ್ಗಾವಣೆಯಾಗಿ ಬಂದ ಅಧಿಕಾರಿಗಳು ಪಂಚಾಯಿತಿಗಳಿಗೆ ಉತ್ತರದಾಯಿತ್ವ ಹೊಂದಿರುವಂತೆ ಕ್ರಮ ಕೈಗೊಳ್ಳಬೇಕು. ಗ್ರಾಪಂಗಳು ಸದೃಢವಾಗಿ ಕಾರ್ಯ ನಿರ್ವಹಿಸಲು ಗ್ರಾಮ ಸಭೆ ನಡೆಸಲು ತಂತ್ರಜ್ಞಾನ ಸೌಲಭ್ಯದ ಬಳಕೆಗೆ ಅವಕಾಶ ನೀಡಬೇಕು. ಜನರ ಪಾಲ್ಗೊಳ್ಳುವಿಕೆ ಖಾತರಿಗೊಳಿಸಬೇಕು. ಗ್ರಾಮಸಭೆಯ ಮಹತ್ವ ಮತ್ತು ಧ್ಯೇಯೋದ್ದೇಶಗಳ ಜನರಿಗೆ ತಿಳಿಸಲು ಆಂದೋಲನ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ಮೌಲನಾಯ್ಕ, ದಾವಣಗೆರೆ ತಾಲೂಕು ಅಧ್ಯಕ್ಷ, ಬೇತೂರು ಗ್ರಾಪಂ ಸದಸ್ಯ ಚೇತನಕುಮಾರ ಎಸ್.ಹೆಂಚಿನಮನೆ, ಜಗಳೂರು ಅಧ್ಯಕ್ಷ ವೀರೇಶ ಇತರರಿದ್ದರು.

ಗ್ರಾಪಂಗಳ ಬಾಪೂಜಿ ಸೇವಾ ಕೇಂದ್ರ, ಅಧಿಕಾರ ವಿಕೇಂದ್ರೀಕರಣ ಕಾಯ್ದೆ, ಕಚೇರಿ ನಿರ್ವಹಣಾ ಕೈಪಿಡಿ, ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ನಿಯಮ ರೂಪಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಿದ್ದೇವೆ.

ದೊಗ್ಗಳ್ಳಿ ವೀರೇಶ, ಒಕ್ಕೂಟದ ಜಿಲ್ಲಾಧ್ಯಕ್ಷ

Share this article