ಮೇ 25ರಂದು ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : May 23, 2026, 02:00 AM IST
ಹಾವೇರಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದಿಂದ ನಡೆಯುವ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಹಾವೇರಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದಿಂದ ನಡೆಯುವ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.

ಹಾವೇರಿ: ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾ ಬಳಗ ರಾಜ್ಯ ಸಮಿತಿ ವತಿಯಿಂದ ಹಾವೇರಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಮೇ 25ರಂದು ಬೆಳಗ್ಗೆ 10.30ಕ್ಕೆ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕರುನಾಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕ, ಮುಖ್ಯೋಪಾಧ್ಯಾಯ, ಸಾಹಿತಿ, ರಂಗ ನಿರ್ದೇಶಕ ಹಾಗೂ ಸಂಘಟನಾಕಾರರಾಗಿ ಉತ್ತಮ ಸೇವೆ ಸಲ್ಲಿಸಿರುವ ಜಿ.ಎಂ. ಓಂಕಾರಣ್ಣನವರ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದ ದಿವಸ ಬೆಳಗ್ಗೆ 8ಕ್ಕೆ ಕನ್ನಡ ಧ್ವಜಾರೋಹಣವನ್ನು ಹಿರಿಯ ಸಾಹಿತಿ ಕೋರಗಲ್ ವಿರುಪಾಕ್ಷಪ್ಪ ನೆರವೇರಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ ಚಾಲನೆ ನೀಡಲಿದ್ದು, ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಕನ್ನಡಾಭಿಮಾನಿಗಳು ಹಾಗೂ ಮಕ್ಕಳು ಭಾಗವಹಿಸಲಿದ್ದಾರೆ ಎಂದರು.ಬೆಳಗ್ಗೆ 10.30ಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿ. ಗಂಗಾಧರ ನಂದಿ ಮಹಾವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಾಗುವುದು. ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪಾರ್ಪಣೆ, ವೇದಿಕೆ ಉದ್ಘಾಟನೆ ನಡೆಯಲಿದೆ. ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಮ್ಮೇಳನ ಉದ್ಘಾಟಿಸಲಿದ್ದು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಉಳಿದಂತೆ ವಿವಿಧ ತಾಲೂಕುಗಳ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಇದೇ ವೇಳೆ ನಾಡಿನ ವಿವಿಧ ಜಿಲ್ಲೆಗಳ ಸಾಹಿತಿಗಳ ಕೃತಿಗಳ ಪುಸ್ತಕ ಲೋಕಾರ್ಪಣೆಯೂ ನಡೆಯಲಿದ್ದು, ಹಿರಿಯ ಸಾಹಿತಿಗಳಿಂದ ಪುಸ್ತಕ ಬಿಡುಗಡೆ ಮಾಡಲಾಗುವುದು. ಸಮ್ಮೇಳನಾಧ್ಯಕ್ಷರ ನುಡಿಯೊಂದಿಗೆ ವಿವಿಧ ಸಾಹಿತ್ಯ ಹಾಗೂ ಚಿಂತನಾತ್ಮಕ ಗೋಷ್ಠಿಗಳು ನಡೆಯಲಿವೆ. ಬಳಿಕ ಮಧ್ಯಾಹ್ನ 1ಕ್ಕೆ ನಡೆಯುವ `ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆಯ ಕೊಡುಗೆಗಳು'''''''' ಎಂಬ ವಿಷಯದ ವಿಚಾರಗೋಷ್ಠಿಗೆ ಡಾ. ಎಸ್.ಪಿ. ಗೌಡರ ಅಧ್ಯಕ್ಷತೆ ವಹಿಸಲಿದ್ದು, ಡಾ. ಪುಷ್ಪಾವತಿ ಶೆಲವಡಿಮಠ ಉಪನ್ಯಾಸ ನೀಡಲಿದ್ದಾರೆ ಎಂದರು.ಮಧ್ಯಾಹ್ನ 2.30ಕ್ಕೆ ನಡೆಯುವ ಕವಿಗೋಷ್ಠಿಗೆ ಹಿರಿಯ ಸಾಹಿತಿ ಡಾ. ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದು, ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಆಶಯ ನುಡಿ ನೀಡಲಿದ್ದಾರೆ. ಇದೇ ವೇಳೆ ಭಿಕ್ಷಾವರ್ತಿಮಠ ಅವರಿಗೆ ಕರುನಾಡ ಶಹರಿ ರತ್ನ ಪ್ರಶಸ್ತಿ ನೀಡಲಾಗುವುದು. ನಂತರ ರಾಜ್ಯದ ವಿವಿಧ ಜಿಲ್ಲೆಗಳ 28 ಕವಿಗಳು ಕವನ ವಾಚನ ಮಾಡಲಿದ್ದಾರೆ ಎಂದು ತಿಳಿಸಿದರು.ನಂತರ ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದೇ ವೇಳೆ ರಾಜ್ಯದ 31 ಜಿಲ್ಲೆಗಳ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಹೇಳಿದರು.ಸಮಾರೋಪ ಸಮಾರಂಭದಲ್ಲಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ವಿಪ ಸದಸ್ಯ ಎಸ್.ವಿ. ಸಂಕನೂರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ವಿಶೇಷ ಆಮಂತ್ರಿತರಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ಹಾಗೂ ಮುಖ್ಯ ಅತಿಥಿಗಳ ಸಮಾರೋಪ ನುಡಿ ಇರಲಿದೆ. ನಿರ್ಣಯ ಮಂಡನೆಯನ್ನು ರಾಘವೇಂದ್ರ ಲಕ್ಷ್ಮಣ ದೊಡ್ಡಮನಿ ಹಾಗೂ ಮುತ್ತುರಾಜ ಮಡೆಣ್ಣನವರ ನಡೆಸಲಿದ್ದು, ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್.ಡಿ. ಮುಡೆಣ್ಣವರ ಅಧ್ಯಕ್ಷೀಯ ಮಾತುಗಳನ್ನಾಡಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ, ಎಸ್.ಎಲ್. ಕಾಡದೇವರಮಠ, ಚಂಪಾ ಹುಣಸಿಕಟ್ಟಿ, ಉಡಚಪ್ಪ ಮಾಳಗಿ, ಸಂಜಯಗಾಂಧಿ ಸಂಜೀವಣ್ಣನವರ, ನಾಗರಾಜ ಎಚ್., ಎಫ್.ಎಚ್. ಕೊರವರ, ವೈ.ಬಿ. ಲಕ್ಷ್ಮಣ, ಮಂಜುಳಾ ಅಕ್ಕಿ, ಲೀಲಾವತಿ ಪಾಟೀಲ, ಕುಮಾರ ತಳವಾರ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣಕೋಣ ಗ್ರಿಡ್‌ನಿಂದಲೇ ಮರಳಿ ವಿದ್ಯುತ್ ಸಂಪರ್ಕ: ಗ್ರಾಮಸ್ಥರ ಹರ್ಷ
ನನ್ನ ಗಟ್ಟಿ ಧ್ವನಿ ಅಡಗಿಸಲು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ: ಆಂಜನೇಯ