ಕನ್ನಡಪ್ರಭ ವಾರ್ತೆ, ತುಮಕೂರುಜನವರಿ 16 ರಿಂದ ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಒಲಿಂಪಿಕ್ ಕ್ರೀಡಾ ಕೂಟವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಒಲಿಂಪಿಕ್ ಆಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅನಂತರಾಜ್ ಕರೆ ನೀಡಿದ್ದಾರೆ.ಮಂಗಳವಾರ ಕರ್ನಾಟಕ ಕ್ರೀಡಾಕೂಟದ ಪೂರ್ವ ಸಿದ್ಧತೆ ಪರಿಶೀಲಿಸಿದ ಅವರು, ಪ್ರತಿ ವರ್ಷ ರಾಜ್ಯದ ಒಂದೊಂದು ಜಿಲ್ಲಾಕೇಂದ್ರದಲ್ಲಿ ಕರ್ನಾಟಕ ಒಲಿಂಪಿಕ್ ಕ್ರೀಡಾಕೂಟಗಳು ನಡೆಯಲಿದ್ದು ಪ್ರಸಕ್ತ ಸಾಲಿನಲ್ಲಿ ತುಮಕೂರಿನಲ್ಲಿ ಆಯೋಜಿಸಲಾಗಿದೆ. ವಿವಿಧ 27 ಕ್ರೀಡೆಗಳು ತುಮಕೂರಿನ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು ಪೂರ್ವರ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ ಎಂದರು.ಈಗಾಗಲೇ ತುಮಕೂರು ಜಿಲ್ಲಾಡಳಿತದಿಂದ ವಿವಿಧ 11 ಸಮಿತಿಗಳನ್ನು ರಚಿಸಿದ್ದು ಸಮಿತಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ. ಆದಾಗ್ಯೂ ರಾಜ್ಯ ವಿವಿಧ ಪ್ರದೇಶಗಳಿಂದ ಸುಮಾರು 9000 ಕ್ಕೂ ಹೆಚ್ಚು ಕ್ರೀಡಾಪಟುಗಳು ತುಮಕೂರಿಗೆ ಆಗಮಿಸಲಿದ್ದು ಅವರಿಗೆ ವಸತಿ, ಊಟ, ಸಾರಿಗೆ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದರು.ಜನವರಿ 16 ರಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಮಾರೋಪ ಸಮಾರಂಭಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳೂ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಗುಣಮಟ್ಟದ ಆತಿಥ್ಯ ಅಗತ್ಯವಿರುತ್ತದೆ. ಅಲ್ಲದೆ ಶಿಷ್ಠಾಚಾರದಂತೆ ಗಣ್ಯರನ್ನು ಆಹ್ವಾನಿಸುವಂತೆ ಅವರು ಸಲಹೆ ನೀಡಿದರು.ಸಭೆಯ ನಂತರ ಮಹಾತ್ಮಗಾಂಧಿ ಕ್ರೀಡಾಂಗಣ ಸೇರಿದಂತೆ ಕ್ರೀಡಾಂಗಣ, ವಸತಿ ವ್ಯವಸ್ಥೆ ಕಲ್ಪಿಸುತ್ತಿರುವ ವಿವಿಧ ಪ್ರದೇಶಗಳು ಹಾಗೂ ಹೋಟೆಲ್ ಇತರೆಡೆ ಒಲಿಂಪಿಕ್ ಸಂಸ್ಥೆಯ ತಂಡ ಭೇಟಿ ನೀಡಿ ವಸತಿ ಸ್ಥಳಗಳಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಇತರೆ ಸೌಕರ್ಯಗಳು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಂಡಿತು.ಜಿಲ್ಲಾಧಿಕಾರಿ ಶುಭಕಲ್ಯಾಣ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.