ಕನ್ನಡಪ್ರಭವಾರ್ತೆ ನವದೆಹಲಿ
ಇತ್ತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕರ್ನಾಟಕದ 9 ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ನಡುವೆಯೇ ರಾಜ್ಯದ ಪ್ರತಿಷ್ಠಿತ ಮೈಸೂರು ಮತ್ತು ಧಾರವಾಡ ವಿಶ್ವವಿದ್ಯಾಲಯಗಳ ಆರ್ಥಿಕ ಬಿಕ್ಕಟ್ಟಿಗೆ ಸ್ಬಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮನವಿ ಮಾಡಿದ್ದಾರೆ.ಮೈಸೂರು, ಧಾರವಾಡ ವಿವಿ ಹಣಕಾಸು ಸಮಸ್ಯೆ ಕುರಿತಂತೆ ರಾಜ್ಯಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ದೇವೇಗೌಡರು, ಈ ಎರಡೂ ವಿವಿಗಳು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ. ಆದರೆ ಸಂಪನ್ಮೂಲ ಕೊರತೆಯಿಂದಾಗಿ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲು ಹೆಣಗಾಡುತ್ತಿವೆ. ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಾಯಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ರಾಜ್ಯದ ನೂತನ 9 ವಿವಿ ಮುಚ್ಚುವ ಅಥವಾ ಬೇರೆ ವಿವಿಯಲ್ಲಿ ವಿಲೀನಗೊಳಿಸುವ ಚಿಂತನೆ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಎಬಿವಿಪಿ ಹಾಗೂ ಪ್ರತಿಪಕ್ಷ ಬಿಜೆಪಿ ಸರ್ಕಾರದ ನಿಲುವನ್ನು ತೀವ್ರವಾಗಿ ವಿರೋಧಿಸುತ್ತಿರುವ ನಡುವೆಯೇ ಇನ್ನೊಂದು ವರ್ಗ ವಿವಿ ಮುಚ್ಚವ ಪರ ನಿಂತಿದೆ. ಹೀಗಾಗಿ ನೂತನ 9 ವಿವಿ ಸೇರಿ ರಾಜ್ಯದ ಎಲ್ಲ ವಿವಿಗಳ ವಾಸ್ತವ ಸ್ಥಿತಿಗತಿ ಕುರಿತಂತೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸುತ್ತಿದೆ. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಮೈಸೂರು, ಧಾರವಾಡ ವಿವಿ ಆರ್ಥಿಕ ಸಮಸ್ಯೆ ತೆರೆದಿಟ್ಟಿರುವ ದೇವೇಗೌಡರು ಕೇಂದ್ರ ಮತ್ತು ರಾಜ್ಯಗಳೆರಡೂ ಶಿಕ್ಷಣ ಸಂಸ್ಥೆಗಳು ಆರ್ಥಿಕ ಕೊರತೆಯಿಂದ ಬಳಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.1916ರಲ್ಲಿ ದೇಶದ ಆರನೇ ವಿಶ್ವವಿದ್ಯಾಲಯವಾಗಿ ಸ್ಥಾಪನೆಯಾದ ಮೈಸೂರು ವಿವಿ ಐತಿಹಾಸಿಕ ಮಹತ್ವ ಹೊಂದಿದೆ. ಭಾರತೀಯ ವಿಜ್ಞಾನ ಕಾಂಗ್ರೆಸ್ ನಂತಹ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೈಸೂರು ವಿವಿ ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮತ್ತು ಬೋಧನೆಗೆ ಗಣನೀಯ ಕೊಡುಗೆ ನೀಡಿದೆ. ಆದರೀಗ ಅಧ್ಯಾಪಕರಿಗೆ ಸಂಬಳ ಪಾವತಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದೆ ಎಂದು ಪರಿಸ್ಥಿತಿ ಎಳೆಎಳೆಯಾಗಿ ಬಿಡಿಸಿಟ್ಟರು.
ಅದೇ ರೀತಿ, ಉತ್ತರ ಕರ್ನಾಟಕದ ಭಾಗದಲ್ಲಿ ಅಗಾಧ ಪ್ರಮಾಣದಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಿರುವ ಧಾರವಾಡ ವಿವಿ ಸಹ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಮಂಜೂರಾಗಿರುವ ಬೋಧಕ ಹುದ್ದೆಗಳು ಖಾಲಿ ಉಳಿದಿವೆ. ಬೋಧಕರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡಲಾಗುತ್ತಿಲ್ಲ. ರಾಜ್ಯ ಸರ್ಕಾರಕ್ಕೂ ಸಾಕಷ್ಟು ಸಂಪನ್ಮೂಲಗಳಿಲ್ಲ ಎಂದರು.ಈ ಕೂಡಲೇ ಕೇಂದ್ರದ ಉನ್ನತ ಶಿಕ್ಷಣ ಸಚಿವರು ಮೈಸೂರು ಮತ್ತು ಧಾರವಾಡ ವಿವಿಗಳ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಕುಲಪತಿಗಳ ನೇಮಕ ಕುರಿತಂತೆ ಯುಜಿಸಿಯ ಪ್ರಸ್ತಾವಿತ ನಿಯಮಗಳು ಸರಿಯಾಗಿಲ್ಲ ಎಂದೂ ದೇವೇಗೌಡರು ಇದೇ ಸಂದರ್ಭದಲ್ಲಿ ಆಕ್ಷೇಪಿಸಿದರು.