ಗ್ಯಾರಂಟಿಗಳಿಂದ ರಾಜ್ಯದ ಜಿಡಿಪಿ ಶೇ.10.20ಕ್ಕೆ ಏರಿಕೆ: ಲಕ್ಷ್ಮೀ ಹೆಬ್ಬಾಳ್ಕರ್‌

KannadaprabhaNewsNetwork | Published : Nov 2, 2024 1:26 AM

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ನಿರೀಕ್ಷಿಸಿದವರಿಗೆ ನಿರಾಸೆಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಫಲಾನುಭವಿಯ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 4 ಸಾವಿರದಿಂದ 5 ಸಾವಿರ ರು.ಗಳ ಆರ್ಥಿಕ ನೆರವು ಲಭಿಸುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಇಲಾಖೆಯ ಆರ್ಥಿಕ ಪ್ರಗತಿ ವರದಿಯಲ್ಲಿ ಕರ್ನಾಟಕ ರಾಜ್ಯದ ಜಿಡಿಪಿ ದರ ಶೇ.10.20 ರಷ್ಟು ದಾಖಲಾಗಿದೆ. ಇದು ದೇಶದ ಒಟ್ಟಾರೆ ಜಿಡಿಪಿ ದರಕ್ಕಿಂತ ಹೆಚ್ಚು, ಈ ಪ್ರಗತಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕೊಡುಗೆ ಗಣನೀಯವಾಗಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿಗೆ ಬಲತುಂಬಿವೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಅವರು ಶುಕ್ರವಾರ ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವದಂಗವಾಗಿ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು.

ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ನಿರೀಕ್ಷಿಸಿದವರಿಗೆ ನಿರಾಸೆಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಫಲಾನುಭವಿಯ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 4 ಸಾವಿರದಿಂದ 5 ಸಾವಿರ ರು.ಗಳ ಆರ್ಥಿಕ ನೆರವು ಲಭಿಸುತ್ತಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ 1.88 ಕೋಟಿ ರು. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದರಿಂದ 33 ಹೆ. ಕೃಷಿ ಭೂಮಿಗೆ ನೀರಾವರಿಯಾಗಲಿದೆ. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗೆ 6.15 ಕೋಟಿ ರು.ಗಳ ವೆಚ್ಚದಲ್ಲಿ 151 ಕಿ.ಮೀ. ನದಿ ದಂಡೆ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಳೆಯಿಂದ ಜಿಲ್ಲೆಯಲ್ಲಿ 1288 ಮನೆಗಳಿಗೆ ಹಾನಿ, 665.10 ಹೆ. ಕೃಷಿ ಹಾಗೂ 200.48 ಹೆ. ತೋಟಗಾರಿಕಾ ಬೆಳೆ ಹಾನಿಯಾಗಿದ್ದು, 3.09 ಕೋಟಿ ರು. ಪರಿಹಾರ ನೀಡಲಾಗಿದೆ ಎಂದವರು ಹೇಳಿದರು.

ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ 2,23,084 ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 2 ಸಾವಿರ ರು.ಗಳಂತೆ ಪಾವತಿಸಿ ಶೇ.96.25 ಪ್ರಗತಿ ಸಾಧಿಸಲಾಗಿದೆ. ಪ್ರತಿ ತಿಂಗಳು ಜನತಾದರ್ಶನ ಕಾರ್ಯಕ್ರಮದಡಿ 1089 ಅರ್ಜಿಗಳನ್ನು ಸ್ವೀಕರಿಸಿ ಎಲ್ಲಾ ಅರ್ಜಿಗಳನ್ನು ವಿಲೆೇವಾರಿ ಮಾಡಲಾಗಿದೆ ಎಂದರು.

ಇದಕ್ಕೆ ಮೊದಲು ಸಚಿವೆ ಜಿಲ್ಲೆಯ ಪೊಲೀಸ್, ಗೃಹರಕ್ಷಕ, ಎನ್‌ಸಿಸಿ, ಅಗ್ನಿಶಾಮಕ ಇತ್ಯಾದಿ ತಂಡಗಳ ಪಥಸಂಚಲನ ವೀಕ್ಷಿಸಿ ಗೌರವ ರಕ್ಷೆಯನ್ನು ಸ್ವೀಕರಿಸಿದರು. ನಂತರ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ವಿತರಿಸಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾದೇವಿ, ಎಸ್ಪಿ ಡಾ.ಅರುಣ್‌ಕುಮಾರ್, ಜಿಪಂ ಸಿಇಓ ಪ್ರತೀಕ್ ಬಾಯಲ್, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರು ವೇದಿಕೆಯಲ್ಲಿದ್ದರು.

Share this article