ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಈಡುಗಾಯಿ ಚಳವಳಿ ನಡೆಸಿ, ರಾಜ್ಯ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅತಿಯಾದ ಭ್ರಷ್ಟಾಚಾರ, ಲಂಚಗುಳಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಭ್ರಷ್ಟ ವ್ಯವಸ್ಥೆ ವಿರುದ್ಧ ರಾಜ್ಯಾದ್ಯಂತ ವಾಟಾಳ್ ಪಕ್ಷದ ವತಿಯಿಂದ ಪ್ರವಾಸ ಮಾಡಿ ಯುವ ಜನರು, ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳನ್ನು ಸಂಘಟಿಸಿ ಹೊಸ ಚೈತನ್ಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಅದ್ಭುತ ಕನ್ನಡ ಶಕ್ತಿ ಉದಯವಾಗಬೇಕು. ಆಗ ಮಾತ್ರ ಭ್ರಷ್ಟಾಚಾರ ತೊಲಗಲು ಸಾಧ್ಯ ಎಂದು ಹೇಳಿದರು.ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಎಲ್ಲರೂ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ. ಹೊಸ ಕನ್ನಡ ಶಕ್ತಿ ಉದಯವಾಗಿ ಪ್ರಾಮಾಣಿಕರು, ನಂಬಿಕಸ್ಥರು, ಪ್ರೀತಿವಂತರು ಬರಬೇಕು. ಭ್ರಷ್ಟಾಚಾರ ನಿಲ್ಲಿಸಬೇಕು. ಇದಕ್ಕಾಗಿ ತೀವ್ರ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮಹಾತ್ಮಾ ಗಾಂಧೀಜಿ ಈ ದೇಶಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡಿದ್ದರು, ಅವರ ಜೀವನವೇ ದಿವ್ಯ ಸಂದೇಶ, ಆದರೆ, ಇಂದು ವ್ಯವಸ್ಥೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ಕಂಡಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾರೀ ಭ್ರಷ್ಟಾಚಾರ ನಡೆಸಿದ್ದರು, ಶಾಸಕರನ್ನು ಕೋಟ್ಯಾಂತರ ರುಪಾಯಿಗಳಿಗೆ ಖರೀದಿಸಿದ್ದರು, ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದರು. ಅಂದಿನಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಪ್ರಾರಂಭವಾಯಿತು, ಭ್ರಷ್ಟಾಚಾರದಿಂದ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು, ಅಂತಹ ವ್ಯಕ್ತಿಯ ಬಗ್ಗೆ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಅಭಿಮಾನೋತ್ಸವ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಪ್ರತಿಭಟನೆಯಲ್ಲಿ ಕನ್ನಡ ಸೇನೆ ಮಂಜುನಾಥ್, ಮಂಡಿಬೆಟ್ಟಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.