ಮುಂಡರಗಿ: ತಲೆ ತಗ್ಗಿಸಿ ಪುಸ್ತಕಗಳನ್ನು ಓದು. ಭವಿಷ್ಯದಲ್ಲಿ ಅವು ನಿಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತವೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ತಾಲೂಕು ಆಡಳಿತ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಪುನಶ್ಚೇತನ ಕಾರ್ಯಾಗಾರ ಹಾಗೂ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಬಡ ವರ್ಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಕ್ಕಳ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ನಾಡಿಗೆ ಕೀರ್ತಿ ತರುವಂತೆ ಸಾಧನೆ ಮಾಡಬೇಕು. ಜತೆಗೆ ಮಕ್ಕಳು ದುಶ್ಚಟಗಳಿಂದ ದೂರ ಇರುವ ಮೂಲಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರು.ಸಮಾಜ ಕಲ್ಯಾಣಾಧಿಕಾರಿ ಉದಯಕುಮಾರ ಯಲಿವಾಳ ಮಾತನಾಡಿ, ನಮ್ಮ ಇಲಾಖೆಯ ಪ್ರಮುಖ ಉದ್ದೇಶವೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಯಾಗಿದ್ದು, ಇದರಲ್ಲಿ ವಸತಿನಿಲಯಗಳ ಮಕ್ಕಳ ಶೈಕ್ಷಣಿಕ ಪ್ರಗತಿಯೂ ಒಂದಾಗಿದೆ. ಬಡತನದ ಕಾರಣದಿಂದಾಗಿ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ವಸತಿನಿಲಯಗಳಲ್ಲಿ ಅನ್ನ, ಅಕ್ಷರ ಮತ್ತು ಜ್ಞಾನ ನೀಡಿ ಪೋಷಿಸಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ನಂದಾ ಹಣಬರಟ್ಟಿ ಮಾತನಾಡಿ, ಪಾಲಕರು ನಮ್ಮ ಮಕ್ಕಳು ಭವಿಷ್ಯದಲ್ಲಿ ಏನೆಲ್ಲ ಸಾಧನೆ ಮಾಡಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ. ಅವರ ಕನಸನ್ನು ನನಸು ಮಾಡುವಲ್ಲಿ ಹಾಗೂ ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಶ್ರಮವಹಿಸಿ ಓದಿ ಸಾಧನೆ ಮಾಡಬೇಕು ಎಂದರುಬಿಇಒ ಗಂಗಾಧರ ಅಣ್ಣಿಗೇರಿ ಮಾತನಾಡಿದರು. ಶಿಕ್ಷಕರಾದ ಹನುಮಂತರೆಡ್ಡಿ ಇಟಗಿ, ಕುಬೇರನಾಯ್ಕ ಲಮಾಣಿ, ಶಂಕ್ರಪ್ಪ ಗೋಣೆಪ್ಪನವರ, ಸೂಫಿಯಾ ಬೇಗಂ, ಸುಮಂಗಲಾ ನರ್ತಿ, ಶಾಂತಲಾ ಮೆಟ್ಟಿನ, ಬಾಬುಸಾಬ, ಪ್ರವೀಣ, ರುದ್ರಪ್ಪ, ಸುನೀಲ, ಮಂಜುನಾಥ ಹಾಗೂ ಇತರರು ಇದ್ದರು. ಯಲ್ಲಪ್ಪ ನಾಗಮ್ಮನವರ ಸ್ವಾಗತಿಸಿದರು. ಶ್ರೀಕಾಂತ ಅರಹುಣಸಿ ನಿರೂಪಿಸಿದರು. ಎಲ್.ಎಂ. ಗಚ್ಚಿನಮನಿ ವಂದಿಸಿದರು.