ರೋಣ: ತಂಬಾಕು, ಮದ್ಯಪಾನ ಇನ್ನೂ ಕೆಲವು ಕಾನೂನುಬಾಹಿರ ಮಾದಕ ವಸ್ತುಗಳು ಮನುಷ್ಯನ ಮೆದುಳಿನ ಮೇಲೆ ಮತ್ತು ಬರುವ ಪರಿಣಾಮ ಬೀರುತ್ತವೆ. ಜತೆಗೆ ನಶೆಯಲ್ಲಿರುವಂತೆ ಮಾಡುವ ಮಾದಕ ಪದಾರ್ಥಗಳು ಪ್ರಾಣಕ್ಕೆ ಕಂಟಕವಾಗುವುವು. ಆದ್ದರಿಂದ ಜನತೆ ಮಾದಕ ವ್ಯಸನದಿಂದ ದೂರವಿರಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ತಿಳಿಸಿದರು.ಗುರುವಾರ ಪಟ್ಟಣದ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಗದಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಶರಣಬಸವೇಶ್ವರ ಪ್ರೌಢಶಾಲೆ ರೋಣ ಇವರ ಆಶ್ರಯದಲ್ಲಿ ಜರುಗಿದ ನಶಾ ಮುಕ್ತ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿ, ಧೂಮಪಾನ ಮದ್ಯಪಾನದಂತಹ ವ್ಯಸನಗಳು ಹದಿಹರೆಯದ ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳ ಮತ್ತು ಕುಟುಂಬದ ಬದುಕನ್ನು ನಾಶ ಮಾಡುತ್ತದೆ. ಆದ್ದರಿಂದ ಹದಿಹರೆಯದ ಮಕ್ಕಳು ಇಂತಹ ಮಾದಕ ವಸ್ತುಗಳಿಂದ ಜಾಗೃತರಾಗಿ ಇರಬೇಕೆಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.