ಅಮೆರಿಕಾ ವಿವಿಯೊಂದಿಗೆ ಎಸ್ಟಿಜಿ ಶಿಕ್ಷಣ ಸಂಸ್ಥೆ ಒಪ್ಪಂದ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಶಿಕ್ಷಣ ಪದ್ದತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಮೆರಿಕಾ ಯೂನಿವರ್ಸಿಟಿಯೊಂದಿಗೆ ಚಿನಕುರಳಿಯ ಎಸ್ ಟಿಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ವಿನಿಮಯಕ್ಕೆಸಹಿ ಹಾಕುವ ಮೂಲಕ ಒಪ್ಪಂದ ಮಾಡಿಕೊಂಡಿದೆ.
ಪಾಂಡವಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಶಿಕ್ಷಣ ಪದ್ದತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಮೆರಿಕಾ ಯೂನಿವರ್ಸಿಟಿಯೊಂದಿಗೆ ಚಿನಕುರಳಿಯ ಎಸ್ ಟಿಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ವಿನಿಮಯಕ್ಕೆಸಹಿ ಹಾಕುವ ಮೂಲಕ ಒಪ್ಪಂದ ಮಾಡಿಕೊಂಡಿದೆ. ಚಿನಕುರಳಿ ಎಸ್‌ಟಿಜಿ ಶಿಕ್ಷಣ ಅಧ್ಯಕ್ಷ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿಇಓ ಸಿ.ಪಿ.ಶಿವರಾಜು, ಟ್ರಸ್ಟಿ ತನುಶ್ರೀ ಶಿವರಾಜು ಅವರು ಅಮೆರಿಕಾದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಯ ಡೀನ್ ಡಾ. ಜೇಮ್ಸ್ ಹಾಗೂ ಪ್ರೊ.ಡಾ. ಡೇವಿಡ್ ಸೇರಿದಂತೆ ಪ್ರೊಫೆಸರ್ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿ ವಿನಿಮಯಕ್ಕೆ ಸಹಿ ಹಾಕಲಾಯಿತು. ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯೊಂದಿಗೆ ವಿದ್ಯಾರ್ಥಿ ವಿನಿಮಯಕ್ಕೆ ಒಪ್ಪಂದ ಮಾಡಿಕೊಂಡ ರಾಜ್ಯದ ಎರಡನೇ ಶಿಕ್ಷಣ ಸಂಸ್ಥೆಯಾಗಿದೆ. ಇದಕ್ಕೂ ಮೊದಲು ಬೆಳಗಾವಿಯ ಸೈನಿಕ್ ಶಾಲೆ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವಿನಿಮಯ ಒಪ್ಪಂದ ಮಾಡಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಪದ್ದತಿಯ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಅವರ ಸಲಹೆಯಂತೆ ಸಿಇಓ ಸಿ.ಪಿ.ಶಿವರಾಜು ಅವರು ಅಮೆರಿಕಾದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಯೊಂದಿಗೆ ವಿದ್ಯಾರ್ಥಿ ವಿನಿಮಯಕ್ಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ತೀರ್ಮಾನಿಸಿದ್ದರು. ಅದರಂತೆ ವಿದ್ಯಾರ್ಥಿ ವಿನಿಮಯಕ್ಕೆ ಒಪ್ಪಂದ ಒಪ್ಪಿಗೆ ನೀಡಿದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಯ ಡೀನ್ ಡಾ.ಜೇಮ್ಸ್, ಪ್ರೊ. ಡಾ.ಡೇವಿಡ್ ಅವರು ಕಳೆದ 2022 ಜುಲೈ ತಿಂಗಳಲ್ಲಿ ತಾಲೂಕಿನ ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಆಗಮಿಸಿ ಎಸ್‌ಟಿಜಿ ಶಿಕ್ಷಣ ಅಧ್ಯಕ್ಷ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿಇಓ ಸಿ.ಪಿ.ಶಿವರಾಜು ಹಾಗೂ ಸಂಸ್ಥೆಯ ಟ್ರಸ್ಟಿಗಳ ಸಮ್ಮುಖದಲ್ಲಿ ವಿದ್ಯಾರ್ಥಿ ವಿನಿಮಯದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೀಗ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಸಿಇಓ ಸಿ.ಪಿ.ಶಿವರಾಜು ಅವರು ಸಹ ಅಮೆರಿಕಾಗೆ ತೆರಳಿ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಒಪ್ಪಂದ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ವಿನಿಮಯ ಒಪ್ಪಂದ ಪ್ರಕಾರ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ 4 ಮಂದಿ ವಿದ್ಯಾರ್ಥಿಗಳು ಅಮೇರಿಕದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಗೆ ಹೋಗಿ ಸುಮಾರು 15 ದಿನಗಳ ಕಾಲ ಅಮೇರಿಕದ ಶಿಕ್ಷಣ ವ್ಯವಸ್ಥೆ, ಗುಣಮಟ್ಟ, ಅಲ್ಲಿನ ಶಾಲೆಗಳಲ್ಲಿ ದೊರೆಯುವ ಮೂಲ ಸೌಕರ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು. ಅಮೆರಿಕಾದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಯ 4 ಮಂದಿ ವಿದ್ಯಾರ್ಥಿಗಳು ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಆಗಮಿಸಿ ಇಲ್ಲಿನ ಶಿಕ್ಷಣ ಪದ್ದತಿಯನ್ನು ಅರಿವು ಮೂಡಿಸಿಕೊಳ್ಳುವುದು ವಿದ್ಯಾರ್ಥಿ ವಿನಿಮಯದ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಅಮೇರಿಕಕ್ಕೆ ತೆರಳುವ ಎಲ್ಲಾ ಖರ್ಚು ವೆಚ್ಚವನ್ನು ಶಿಕ್ಷಣ ಸಂಸ್ಥೆಯೇ ಭರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯಮಟ್ಟದ ಗುಣಮಟ್ಟದ ಶಿಕ್ಷಣ ನೀಡಲು ಎಸ್‌ಟಿಜಿ ಶಿಕ್ಷಣ ಸಂಸ್ಥೆ ಮುಂದಾಗಿದೆ.

Share this article