ಕನ್ನಡಪ್ರಭ ವಾರ್ತೆ ನವದೆಹಲಿ
ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಿದ್ದರಾಮಯ್ಯ ಅವರ ಪತ್ನಿ ನನಗೆ ಸಹೋದರಿ ಸಮಾನ. ಅವರ ಬಗ್ಗೆ ಗೌರವ ಇಟ್ಟುಕೊಂಡೇ ಈ ಮಾತು ಹೇಳುತ್ತಿದ್ದೇನೆ ಎಂದರು.
ಸೋಮವಾರ ರಾತ್ರಿ ಏಕಾಏಕಿ ಪತ್ರ ಬರೆದು ನಮಗೆ ನಿವೇಶನಗಳು ಬೇಡ, ಅದನ್ನು ವಾಪಸ್ ಮಾಡುತ್ತಿದ್ದೇನೆ. ಮನೆ, ಚಿನ್ನ, ಒಡವೆ ಯಾವುದರ ಮೇಲೂ ಮಮತೆ ಇಲ್ಲ. ನನ್ನ ಪತಿಯ ಮುಂದೆ ಅದೆಲ್ಲ ತೃಣಕ್ಕೆ ಸಮಾನ ಎಂದು ಪಾರ್ವತಿ ಅವರು ಹೇಳಿಕೊಂಡಿದ್ದಾರೆ. ನಾನು ಆ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ. ಆದರೆ ಅದೇನೋ ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿರುವ ಸಿದ್ದರಾಮಯ್ಯನವರ ಗಮನಕ್ಕೆ ತಾರದೇ ಆ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆಯೇ? ವಿನಾಕಾರಣ ಸಿದ್ದರಾಮಯ್ಯ ನನ್ನನ್ನು ಸುಳ್ಳುಗಾರ ಎಂದು ಹೇಳುತ್ತಾರೆ. ಆದರೆ ಇವರ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.ನಿವೇಶನ ವಾಪಸ್ ಕೊಡುವ ತರಾತುರಿಯ ತೀರ್ಮಾನ ತೆಗೆದುಕೊಳ್ಳುವಂತೆ ಹೇಳಿಕೊಟ್ಟಿದ್ದು ಯಾರು? ಕಳ್ಳತನ ಮಾಡಿ ಆಮೇಲೆ ತಪ್ಪಾಯ್ತು ಅಂದರೆ ಬಿಡಲು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
ಮುಡಾಗಿಂತಲೂ ದೊಡ್ಡ ಹಗರಣ ಇನ್ನೊಂದಿದೆ
ಬಡವರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಡಿನೋಟಿಫಿಕೇಷನ್ ಮಾಡಿಸಿಕೊಂಡು, ಅದನ್ನು ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲೂ ಸಿದ್ದರಾಮಯ್ಯ ಮೊದಲ ಆರೋಪಿ. ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದಾರೆ. ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿ ರಿಲೀಫ್ ಪಡೆದುಕೊಂಡರು. ಇದು 14 ಸೈಟ್ ಗಿಂತ ದೊಡ್ಡ ಹಗರಣ. ಊರಿಗೆ ಬುದ್ದಿ ಹೇಳೋರು ಅಲ್ಲಿ ಏನೇನು ಮಾಡಿದ್ದೀರಿ, ಸತ್ಯ ಹೇಳಿ. ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಪ್ರಕರಣಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.