ಮಾದೇನಹಳ್ಳಿ ಬಳಿ ಕಲ್ಲು ಗಣಿಗಾರಿಕೆಗೆ ಅನುಮತಿ ಸಲ್ಲದು

KannadaprabhaNewsNetwork | Published : Jan 18, 2025 12:49 AM

ಸಾರಾಂಶ

ತಾಲೂಕಿನ ಮಾದೇನಹಳ್ಳಿ ಗಡಿ ವ್ಯಾಪ್ತಿಯಲ್ಲಿ ಬರುವ ಸ.ನಂ. 71, 72ರಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದು, ಇಲ್ಲಿಂದ ಪುಡಿಮಾಡಿದ ಕಲ್ಲುಗಳನ್ನು ಹೊರತರಲು, ಹೊಲಗಳ ಮಧ್ಯದಲ್ಲಿ ದಾರಿ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ಪರಿಸರ ಕಲುಷಿತಗೊಳ್ಳಲಿದೆ ಎಂದು ಹೊನ್ನಾಳಿಯಲ್ಲಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- ಜನ-ಜಾನುವಾರು ಆರೋಗ್ಯ, ಬೆಳೆಗಳ ಮೇಲೆ ದುಷ್ಪರಿಣಾಮ: ಗ್ರಾಮಸ್ಥರು ಆತಂಕ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಮಾದೇನಹಳ್ಳಿ ಗಡಿ ವ್ಯಾಪ್ತಿಯಲ್ಲಿ ಬರುವ ಸ.ನಂ. 71, 72ರಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದು, ಇಲ್ಲಿಂದ ಪುಡಿಮಾಡಿದ ಕಲ್ಲುಗಳನ್ನು ಹೊರತರಲು, ಹೊಲಗಳ ಮಧ್ಯದಲ್ಲಿ ದಾರಿ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ಪರಿಸರ ಕಲುಷಿತಗೊಳ್ಳಲಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

ಹೊಸ ದಾರಿಯನ್ನು ಗ್ರಾಮದಿಂದ ಕೇವಲ 200 ಮೀಟರ್ ದೂರದಲ್ಲಿ ನಿರ್ಮಿಸುತ್ತಿದ್ದಾರೆ. ಹೀಗಾಗಿ, ಲಾರಿಗಳು ದಿನವಿಡೀ ಓಡಾಡುವುದರಿಂದ ಶಬ್ಧ ಮಾಲಿನ್ಯ, ಗಣಿಗಾರಿಕೆ ಧೂಳು ಗ್ರಾಮದೊಳಗೆ ನುಗ್ಗಿ ಜನರ ಆರೋಗ್ಯ ಮತ್ತು ನೆಮ್ಮದಿ ಹಾಳು ಮಾಡುತ್ತದೆ ಎಂದು ಬುಧವಾರ ಸಂಜೆ ತಹಸೀಲ್ದಾರ್ ಕಚೇರಿಗೆ 50ಕ್ಕೂ ಹೆಚ್ಚು ಜನ ತೆರಳಿ ಮನವಿ ಸಲ್ಲಿಸಿದ ಸಂದರ್ಭ ಗ್ರಾಮಸ್ಥರು ಮಾತನಾಡಿದರು.

ಕಲ್ಲು ಗಣಿಗಾರಿಕೆಯಿಂದ ಕೇವಲ ಗ್ರಾಮಸ್ಥರಿಗೆ ತೊಂದರೆ ಅಷ್ಟೇ ಅಲ್ಲ, ಸುತ್ತಮುತ್ತಲು ಬೆಳೆದ ಬೆಳೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಧೂಳು ಬೆಳೆಗಳ ಮೇಲೆ ಬಿದ್ದು ಬೆಳೆ ಕುಂಠಿತವಾಗುತ್ತಿದೆ. ಇಳುವರಿ ಬರುವುದಿಲ್ಲ. ಒಂದು ಕಡೆ ಆರೋಗ್ಯ ಹಾಳಾಗುವಂತಹ ಪರಿಸ್ಥಿತಿ ನಿರ್ಮಾಣವಾದರೆ, ಮತ್ತೊಂದು ಕಡೆ ಬೆಳೆದ ಬೆಳೆಯೂ ರೈತರಿಗೆ ದಕ್ಕದ ಪರಿಸ್ಥಿತಿ ನಿರ್ಮಾಣವಾಗಲಿದೆ. ದನಕರುಗಳು ಮೇಯಲು ಹಸಿರು ಹುಲ್ಲು, ಗರಿಕೆಯೂ ಸಿಗದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

2023ರಲ್ಲೂ ಈ ಸಂಬಂಧ ತಾಲೂಕು ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದೆವು. ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೆ ಕಲ್ಲು ಗಣಿಗಾರಿಕೆ ಗುತ್ತಿಗೆದಾರರು ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯ ಮತ್ತು ಅನಾನುಕೂಲ ಆಗುತ್ತದೆ. ಈ ದಾರಿಯಲ್ಲಿ ಬಡರೈತರ ಅರ್ಧ ಎಕರೆ, ಮುಕ್ಕಾಲು ಎಕರೆಯಷ್ಟು ಪುಡಿ ಜಮೀನುಗಳೂ ಇವೆ. ಈ ಜಮೀನುಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರ ಗತಿ ಏನು? ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಕಲ್ಲು ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದರು.

ಈ ಸಂದರ್ಭ ಕೆ.ಪಿ. ಗಂಗಾಧರ ಗೌಡ, ಮಹೇಂದ್ರಪ್ಪ, ಅರುಣ್‌ಕುಮಾರ್, ಮಂಜಪ್ಪ, ಓಂಕಾರಪ್ಪ, ಮಲ್ಲಿಕಾರ್ಜುನಪ್ಪ, ಶಿವಾನಂದಪ್ಪ, ಶಿವಕುಮಾರ್, ಜಯಪ್ಪ, ವಿರೂಪಾಕ್ಷಪ್ಪ, ಎಸ್. ಸಿದ್ದಪ್ಪ ಮತ್ತಿತರರು ಕೆಲವರು ಹಾಜರಿದ್ದರು.

- - - -16ಎಚ್.ಎಲ್.ಐ1.ಜೆಪಿಜಿ:

ತಹಸೀಲ್ದಾರ್ ಕಚೇರಿಗೆ ತೆರಳಿದ ಮಾದೇನಹಳ್ಳಿ ಗ್ರಾಮಸ್ಥರು, ಗ್ರಾಮ ಸಮೀಪದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಕೊಡಬಾರದು ಎಂದು ಒತ್ತಾಯಿಸಿ ಶಿರಸ್ತೇದಾರ್ ಮಂಜುನಾಥ್ ಅವರಿಗೆ ಮನವಿ ಮಾಡಿದರು.

Share this article