- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಖಂಡಿಸಿ ರೈತ-ಕಾರ್ಮಿಕರ ಪ್ರತಿಭಟನೆಯಲ್ಲಿ ಮುಖಂಡರ ತಾಕೀತು - - -
ದೇಶದಲ್ಲಿ 4 ಕರಾಳ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ನಗರದಲ್ಲಿ ಗುರುವಾರ ಕೇಂದ್ರ ಕಾರ್ಮಿಕ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾದ ರೈತ ಸಂಘಟನೆಗಳು, ಬ್ಯಾಂಕ್-ವಿಮೆ-ಕಾರ್ಖಾನೆ ಸೇರಿದಂತೆ ಸ್ವತಂತ್ರ ಸಂಘಟನೆಗಳು ಒಂದು ದಿನದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಿದವು.
ನಗರದ ಶ್ರೀ ಜಯದೇವ ವೃತ್ತದಲ್ಲಿ ರೈತ, ಕಾರ್ಮಿಕ, ಬ್ಯಾಂಕ್ ನೌಕರರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕಾರ್ಮಿಕ- ರೈತ ಸಂಘಟನೆಗಳ ಮುಖಂಡರು ಮಾತನಾಡಿ, ಎಲ್ಲ ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ಸೇವೆಗಳಾದ ರೈಲ್ವೆ, ಬಂದರು ಮತ್ತು ಹಡಗು ಕಟ್ಟೆ, ಕಲ್ಲಿದ್ದಲು ಗಣಿ, ತೈಲ, ಉಕ್ಕು, ರಕ್ಷಣಾ, ರಸ್ತೆ ಮಾರ್ಗ, ವಿಮಾನ ನಿಲ್ದಾಣ, ಬ್ಯಾಂಕ್, ವಿಮೆ, ದೂರ ಸಂಪರ್ಕ, ಅಂಚೆ, ಪರಮಾಣು ಶಕ್ತಿ, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಇತ್ಯಾದಿಗಳನ್ನು ಖಾಸಗೀಕರಿಸುತ್ತ ಭಾರತೀಯ ಮತ್ತು ವಿದೇಶಿ ಮೂಲದ ದೊಡ್ಡ ಕಾರ್ಪೊರೇಟ್ ಕಂಪನಿಗೆ ಕೇಂದ್ರವು ಮಾರಾಟ ಮಾಡುವುದನ್ನು ಮುಂದುವರಿಸಿದೆ ಎಂದು ಆರೋಪಿಸಿದರು.
ವಿದ್ಯುತ್ ತಿದ್ದುಪಡಿ ಮಸೂದೆ-2025ನ್ನು ಕಾಯ್ದೆ ಮಾಡಿ, ವಿದ್ಯುತ್ ಸರಬರಾಜು ಖಾಸಗೀಕರಣಕ್ಕೆ ಮುಂದಾಗಿದೆ. ಈವರೆಗೂ ರಕ್ಷಿಸಲ್ಪಟ್ಟಿದ್ದ ವಿಮಾ ಕಂಪನಿಗಳನ್ನು ಶೇ.100 ವಿದೇಶಿ ಮತ್ತು ದೇಶೀಯ ವ್ಯಾಪಾರಿ ಮನೆತನಗಳಿಗೆ ತೆರೆದಿದೆ. ಅಣುಶಕ್ತಿ ಅಭಿವೃದ್ಧಿಪಡಿಸುವ (ಶಾಂತಿ) ಹೆಸರಲ್ಲಿ ಜನರ ಸುರಕ್ಷತೆಗೆ ಅಣುಶಕ್ತಿ ಭದ್ರತೆಗೆ ಅಪಾಯ ತಂದಿದೆ. ಇಷ್ಟು ಸಾಲದೆಂಬಂತೆ ಅರಾವಳಿ ಪರ್ವತ ಶ್ರೇಣಿ ನಾಶಪಡಿಸಲು ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪು ಉತ್ತರ ಭಾರತ ಜನರ ಬದುಕನ್ನು ಗಂಡಾಂತರಕ್ಕೆ ತಳ್ಳಿರುವುದು ಆತಂಕದ ಸಂಗತಿ ಎಂದು ಅವರು ತಿಳಿಸಿದರು.
ರೈತ-ಕಾರ್ಮಿಕ ಮುಖಂಡರಾದ ಆವರಗೆರೆ ಎಚ್.ಜಿ.ಉಮೇಶ, ಕೆ.ರಾಘವೇಂದ್ರ ನಾಯರಿ, ಸೋಮಶೇಖರ, ಹೊನ್ನೂರು ಮುನಿಯಪ್ಪ, ಕೆ.ಎಚ್.ಆನಂದರಾಜ, ಮಧು ತೊಗಲೇರಿ, ಇ.ಶ್ರೀನಿವಾಸ, ಅಣಬೇರು ತಿಪ್ಪೇಸ್ವಾಮಿ, ವಿ.ಲಕ್ಷ್ಮಣ, ಸತೀಶ ಅರವಿಂದ, ಹನುಮಂತಪ್ಪ, ಮಲ್ಲೇಶ, ರಮೇಶ ದಾಸರ, ಇಪ್ಟಾ ಐರಣಿ ಚಂದ್ರು, ಪವಿತ್ರಾ, ಶಿವಾಜಿ ರಾವ್, ಮಂಜುನಾಥ ಕೈದಾಳೆ, ಮಂಜುನಾಥ ಕುಕ್ಕವಾಡ, ಗುಮ್ಮನೂರು ಬಸವರಾಜ, ಬುಳ್ಳಾಪುರ ಹನುಮಂತಪ್ಪ, ಅಷ್ಫಕ್, ಜಬೀನಾ ಖಾನಂ, ಎಂ.ಕರಿಬಸಪ್ಪ, ಮರುಳಸಿದ್ದಪ್ಪ, ನರೇಗಾ ರಂಗನಾಥ, ಎಚ್‌ಕೆಆರ್ ಸುರೇಶ್ ಇತರರು ಇದ್ದರು.
(ಕೋಟ್) ಹಿಂದಿನ ಕಾಂಗ್ರೆಸ್ ಸರ್ಕಾರವು ಕಾರ್ಮಿಕ ಕಾಯ್ದೆ ತರ್ಕ ಬದ್ಧಗೊಳಿಸಲು ತಿದ್ದುಪಡಿಗೆ ಉದ್ದೇಶಿಸಿತ್ತು. ಅದನ್ನೇ ಇಂದಿನ ಬಿಜೆಪಿಯು ಸಂಹಿತೀಕರಣದ ರೂಪದಲ್ಲಿ ಜಾರಿಗೊಳಿಸುತ್ತಿದೆ. ಈ ನೀತಿಗಳು ಸ್ಪಷ್ಟವಾಗಿ ವರ್ಗ ನೀತಿಗಳೇ ಹೊರತು ಈ ಪಕ್ಷ, ಆ ಪಕ್ಷದ ನೀತಿಗಳಲ್ಲ.
- - -