ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಪರಿಹಾರಕ್ಕೆ ಮುಂದಾಗಿ

KannadaprabhaNewsNetwork | Published : Dec 19, 2024 12:30 AM

ಸಾರಾಂಶ

ಗಜೇಂದ್ರಗಡ ಪಟ್ಟಣವು ಜಿಲ್ಲೆಯಲ್ಲಿಯೇ ಶರವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಜನರಿಗೆ ವ್ಯಾಪಾರಸ್ಥರಿಗೆ ಇದೊಂದು ಜೀವಾಳ

ಗಜೇಂದ್ರಗಡ: ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆ ತ್ವರಿತಗತಿಯಲ್ಲಿ ಪರಿಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳು ಸಂಘ ತಾಲೂಕು ಸಮಿತಿ ನೇತೃತ್ವದಲ್ಲಿ ಬುಧವಾರ ತಹಸೀಲ್ದಾರ್‌, ಪಿಎಸ್‌ಐ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ಶಾಮೀದಸಾಬ್‌ ದಿಂಡವಾಡ ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಗಳಿಗೆ ಹಾಗೂ ಕುಂದು ಕೊರತೆಗಳ ಪರಿಹಾರಕ್ಕಾಗಿ ಮತ್ತು ಹಕ್ಕೊತ್ತಾಯ ಕುರಿತು ತಹಸೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೀದಿ ಬದಿಯ ವ್ಯಾಪಾರಿಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಗಜೇಂದ್ರಗಡ ಪಟ್ಟಣವು ಜಿಲ್ಲೆಯಲ್ಲಿಯೇ ಶರವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಜನರಿಗೆ ವ್ಯಾಪಾರಸ್ಥರಿಗೆ ಇದೊಂದು ಜೀವಾಳವಾಗಿದ್ದು, ದೀಡಿರ್‌ ಮಾರುಕಟ್ಟೆ ಸ್ಥಳಾಂತರ ಭಾಗವಾಗಿ ಎಷ್ಟೋ ಬಡ ಕುಟುಂಬಗಳು ಇದೀಗ ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರಿಪಡಿಸಲು ಮುಂದಾಗಬೇಕು ಎಂದರು.

ಬೀದಿ ಬದಿಯ ವ್ಯಾಪಾರಿಗಳ ಮೇಲೆ ದೌರ್ಜನ್ಯ ವಿನಾಕಾರಣ ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ಯದಲ್ಲಿ ಇಲ್ಲದೇ ಇರುವ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ, ಮೇಲಾಧಿಕಾರಿಗಳ ಒತ್ತಡದ ಮೇರೆಗೆ ಸ್ಥಳೀಯ ಪೊಲೀಸ್‌ ಸಿಬ್ಬಂದಿಗಳು ಗಜೇಂದ್ರಗಡದಲ್ಲಿ ಮಾತ್ರ ಇದೆ ಎಂಬಂತೆ ವರ್ತಿಸುತ್ತಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳ ವಸ್ತುಗಳನ್ನು ಪೊಲೀಸ್‌ ಅಧಿಕಾರಿಗಳು ಮನಬಂದಂತೆ ಕಸಿದುಕೊಂಡು ಹೊಗುವುದು, ಸುಳ್ಳು ಪ್ರಕರಣ ದಾಖಲಿಸುವುದು ಇದರಿಂದ ವ್ಯಾಪಾರ ಮಾಡುವುದು ಕಷ್ಟವಾಗುತ್ತದೆ. ಇದರಿಂದ ನಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸುವ ಮೂಲಕ ಸಂಬಂಧಪಟ್ಟ ಶಾಸಕರು ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ವ್ಯಾಪಾರ ನಡುವೆ ಒಂದು ಜಂಟಿ ಸಭೆಯನ್ನು ನಡೆಸಿ ತಿರ್ಮಾನ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅನಿರ್ದಿಷ್ಟವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಾಲು ರಾಠೋಡ, ಎಂ.ಎಸ್. ಹಡಪದ, ಚೌಡಮ್ಮ ಯಲ್ಪು, ಮೈಬೂಸಾಬ್ ಮಾಲ್ದಾರ, ಮುತ್ತಣ್ಣ ರಾಠೋಡ, ಅಂಬರೇಷ ಚವ್ಹಾಣ, ಮಾರುತಿ ಗೊಂದಳೆ, ಮುತ್ತಣ್ಣ ತೇಜಪ್ಪ ರಾಠೋಡ, ವಿಷ್ಣು ಚಂದುಕರ, ಮಹಾಂತೇಶ ಹೀರೇಮಠ, ಪರಶುರಾಮ ಬಡಿಗೇರ, ದಾನಪ್ಪ ರಾಠೋಡ. ಮಂಜುನಾಥ ಚವ್ಹಾಣ. ನಾಗಪ್ಪ ಅಜ್ಮೀರ್ ಸೇರಿದಂತೆ ಇತರರು ಇದ್ದರು.

Share this article