ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಬೆಳಗಾವಿ ಕ್ಯಾಂಪಸ್‌ನ ಜ್ಞಾನ ಸಂಗಮದಲ್ಲಿ ಸೋಮವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವ (ಭಾಗ-2) ಸಮಾರಂಭದಲ್ಲಿ ಮಾತನಾಡಿದ ಅವರು, ಎಂಜಿನಿಯರ್‌ಗಳು ಕಂಡುಹಿಡಿಯುವ ನವೀನ ತಂತ್ರಜ್ಞಾನಗಳು ಮಾನವಕುಲ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ನೀಡುವಂತಿರಬೇಕು. ಹವಾಮಾನ ಬದಲಾವಣೆ ಎದುರಿಸುವುದರಿಂದ ಹಿಡಿದು ಆರೋಗ್ಯ ಸೇವೆಗಳ ಸುಧಾರಣೆಯವರೆಗೆ ತಂತ್ರಜ್ಞಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜವಾದ ನಾಯಕತ್ವ ಕೇವಲ ನಾವೀನ್ಯತೆಯಲ್ಲಿ ಮಾತ್ರವಲ್ಲ, ಅದು ನೈತಿಕ ಹೊಣೆಗಾರಿಕೆ, ತಂಡದ ಕೆಲಸ ಮತ್ತು ಸೇವಾ ಮನೋಭಾವದಲ್ಲೂ ಅಡಗಿದೆ. ವಿದ್ಯಾರ್ಥಿಗಳು ಸ್ವಾರ್ಥವನ್ನು ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನೀವು ಈಗ ವೃತ್ತಿ ಜೀವನಕ್ಕೆ ಹೆಜ್ಜೆ ಇಡುತ್ತಿದ್ದೀರಿ. ದೊಡ್ಡ ಕನಸುಗಳನ್ನು ಕಾಣಿ, ಧೈರ್ಯವಾಗಿ ಸವಾಲುಗಳನ್ನು ಎದುರಿಸಿ. ವಿಟಿಯು ಕೃತಕ ಬುದ್ಧಿಮತ್ತೆ(ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಅಡ್ವಾನ್ಸ್ ಕಮ್ಯೂನಿಕೇಶನ್ ಹಾಗೂ ಸೈಬರ್ ಸೆಕ್ಯೂರಿಟಿ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಂತ್ರಜ್ಞಾನ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಇವುಗಳು ರಾಷ್ಟ್ರದ ಪ್ರಗತಿ ಹಾಗೂ ಭದ್ರತೆಗೆ ಅತ್ಯಂತ ಅಗತ್ಯವಾದ ಕ್ಷೇತ್ರಗಳಾಗಿವೆ ಎಂದರು.ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಈ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ತಂತ್ರಜ್ಞಾನಗಳು ಸಾಮಾನ್ಯ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಂತಿರಬೇಕು. ಕರ್ನಾಟಕ ರಾಜ್ಯವು ಜ್ಞಾನ, ನಾವೀನ್ಯತೆ ಹಾಗೂ ಉತ್ತಮ ಆಡಳಿತ ಕ್ಷೇತ್ರಗಳಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದರು.ಪ್ರಸ್ತುತ ಕರ್ನಾಟಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ನವೋದ್ಯಮ ಸಂಸ್ಕೃತಿ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೇಶಕ್ಕೆ ದಾರಿ ತೋರಿಸುತ್ತಿದೆ. ಆತ್ಮವಿಶ್ವಾಸದಿಂದ ಅಭಿವೃದ್ಧಿ ಹೊಂದಿದ ಭಾರತ ಸಾಧನೆಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ಭಾರತ ಮತ್ತು ಕರ್ನಾಟಕವನ್ನು ಯುವಪೀಳಿಗೆ ಪ್ರತಿನಿಧಿಸುತ್ತಿದೆ. ಈ ಗುರಿ ಸಾಧನೆಯಲ್ಲಿ ಜ್ಞಾನ, ಕಠಿಣ ಪರಿಶ್ರಮ ಮತ್ತು ಕರ್ತವ್ಯಪ್ರಜ್ಞೆ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಸಾಧನೆಗೆ ಪೋಷಕರು, ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಕುಟುಂಬದ ಕೊಡುಗೆ ಅಪಾರ. ಅವರ ಮಾರ್ಗದರ್ಶನ ಮತ್ತು ತ್ಯಾಗವಿಲ್ಲದೆ ನಿಮ್ಮ ಶೈಕ್ಷಣಿಕ ಪಯಣ ಸಾಧ್ಯವಾಗುತ್ತಿರಲಿಲ್ಲ. ಎಲ್ಲಾ ಪದವಿ ಪುರಸ್ಕೃತರು ಹಾಗೂ ಚಿನ್ನದ ಪದಕ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಶುಭ ಹಾರೈಸಿದರು.ಈ ಘಟಿಕೋತ್ಸವದಲ್ಲಿ ಒಟ್ಟು 8,702 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, ಇವರಲ್ಲಿ 96 ವಿದ್ಯಾರ್ಥಿಗಳು ರ್‍ಯಾಂಕ್ ವಿಜೇತರು ಹಾಗೂ 25 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ. ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲಸಚಿವ ಪ್ರೊ.ಯು.ಜೆ.ಉಜ್ವಲ್, ಪ್ರೊ.ಪ್ರಸಾದ್.ಬಿ. ರಾಂಪೂರೆ ಸೇರಿದಂತೆ ವಿದ್ಯಾವಿಷಯಕ ಪರಿಷತ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.-----
---------
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿದೆ. ಇದಕ್ಕಾಗಿ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. 83 ಸಾವಿರ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳ ಪ್ರದರ್ಶನಕ್ಕಾಗಿ ನಾವು ಈ ತಿಂಗಳು ಓಪನ್ ಡೇ ಮಾಡುತ್ತಿದ್ದೇವೆ. ಉತ್ತಮ ಪ್ಲೇಸ್‌ಮೆಂಟ್‌ನ್ನು ವಿಟಿಯು ನೀಡುತ್ತಿದೆ. 4 ಸಾವಿರ ಇಂಡಸ್ಟ್ರಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಉದ್ದೇಶ.
ಪ್ರೊ.ಎಸ್.ವಿದ್ಯಾಶಂಕರ, ವಿಟಿಯು ಕುಲಪತಿ