ದೊಡ್ಡಬಳ್ಳಾಪುರ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಹೆಚ್ಚು ಶಬ್ದ ಮಾಡುವ, ಮಾಲಿನ್ಯ ಉಂಟುಮಾಡುವ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು.
ಸಾಮೂಹಿಕ ಆಚರಣೆಗೆ ಒತ್ತು:
ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಪೋಟದಿಂದ ಅಪಾಯಗಳು ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಒಟ್ಟಾಗಿ ಸೇರಿ ಆಚರಿಸಿ ಎಂದರು.ಅನಧಿಕೃತ ಮಾರಾಟಗಾರರಿಗೆ ಎಚ್ಚರಿಕೆ:
ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು ಹಾಗೂ ಅಲ್ಲಿ ಹಸಿರು ಪಟಾಕಿಯಲ್ಲದೆ ಯಾವುದಾದರೂ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳು ಸಾಗಾಟ ಮಾಡುತ್ತಿದ್ದಲ್ಲಿ ಕೂಡಲೇ ವಾಣಿಜ್ಯತೆರಿಗೆ ಇಲಾಖೆಯಿಂದ ರಾಜ್ಯದ ಗಡಿಗಳಲ್ಲಿರುವ ತನಿಖಾ ಠಾಣೆಗಳ ಮುಖಾಂತರ ನಿಷೇಧಿತ ಪಟಾಕಿಗಳು ಹಾಗೂ ಸಂಬಂಧಿತ ವಸ್ತುಗಳನ್ನು ಮುಟ್ಟುಗೊಲು ಹಾಕಿಕೊಳ್ಳಬೇಕು, ಸಾಗಾಟ ಮಾಡುವ ವಾಹನವನ್ನು ವಶಪಡಿಸಿಕೊಳ್ಳಬೇಕು ಎಂದು ಪೋಲಿಸ್ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಪಟಾಕಿ ಅಂಗಡಿ ತೆರೆಯಲು ಮಾರ್ಗಸೂಚಿ:ಪಟಾಕಿ ಅಂಗಡಿಗಳನ್ನು ತೆರೆದ ಪ್ರದೇಶದಲ್ಲಿ ಮತ್ತು ಅಂಗಡಿಗಳ ನಡುವೆ ಸಾಕಷ್ಟು ಅಂತರ ಇರುವಂತೆ ಮತ್ತು ಅಂಗಡಿಗಳ ಮುಂದೆ ಸಾರ್ವಜನಿಕರು ಹೆಚ್ಚು ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು. ಅಗ್ನಿಶಾಮಕ ದಳದವರೂ ಜಾಗೃತರಾಗಿರಬೇಕು. ಪಟಾಕಿಗಳನ್ನು ಹಗಲು ಸಮಯದಲ್ಲಿ ಮಾತ್ರ ಮಾರಾಟ ಮಾಡಬೇಕು. ಪಟಾಕಿ ಅಂಗಡಿಗಳ ಮಾಲೀಕರು ಯಾವುದೇ ಕಾರಣಕ್ಕೂ ಪಾಲಕರ ಸಮಕ್ಷಮ ಇಲ್ಲದೆ 18 ವರ್ಷದೊಳಗಿನ ಮಕ್ಕಳಿಗೆ ಪಟಾಕಿ ನೀಡುವಂತಿಲ್ಲ ಈ ಬಗ್ಗೆ ಮಾರಾಟಗಾರರ ತಿಳುವಳಿಕೆ ನೀಡಿ ಎಂದು ಪೊಲೀಸ್, ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ನಿರ್ದೇಶನ ನೀಡಿದರು.ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ಅಪರ ಪೋಲಿಸ್ ವರಿಷ್ಠಾಧಿಕಾರಿ ನಾಗೇಶ್, ದೇವನಹಳ್ಳಿ ತಹಸೀಲ್ದಾರ್ ಬಾಲಕೃಷ್ಣ, ದೊಡ್ಡಬಳ್ಳಾಪುರ ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಮಟ್ಟದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
24ಕೆಡಿಬಿಪಿ1-ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಸಭೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ದೊಡ್ಡಬಳ್ಳಾಪುರ ಎಸಿ ದುರ್ಗಶ್ರೀ, ಎಸ್ಪಿ ನಾಗೇಶ್ ಇತರರಿದ್ದರು.