- ಶೆಟ್ಟಿಕೊಪ್ಪ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ
ಅಯ್ಯಪ್ಪಸ್ವಾಮಿಯ ಕಟ್ಟು ನಿಟ್ಟಿನ ವೃತಾಚರಣೆಯಿಂದ ಮನುಷ್ಯನನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯಬಲ್ಲದು ಎಂದು ಸಿಂಹನಗದ್ದೆ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಬುಧವಾರ ಶೆಟ್ಟಿಕೊಪ್ಪದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ನಡೆದ ಮಕರ ಸಂಕ್ರಾಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವ್ರತಾಚರಣೆಗಳಿಂದ ಮನುಷ್ಯನ ಮನಸ್ಸನ್ನು ಶುದ್ಧಗೊಳಿಸುತ್ತದೆ. ಅಲ್ಲದೆ ಮನುಷ್ಯನ ಅನಾರೋಗ್ಯ ದೂರಾಗಲಿದೆ. ಇದು ಭಕ್ತಿಯ ಮಾರ್ಗಕ್ಕೆ ದಾರಿ ದೀಪವಾಗಬಲ್ಲದು. ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಆಚಾರ- ವಿಚಾರದ ಪದ್ಧತಿಯಲ್ಲಿ ನಮಗೆ ಸ್ವಾತಂತ್ರ್ಯವಿದೆ. ಆದರೆ, ಸ್ವಾತಂತ್ರದ ಅರಿವು ನಮಗೆ ಆಗಬೇಕಾದರೆ ದೇಶ ಸಂಚಾರ ಮಾಡಬೇಕು. ಭಗವಂತನ ಸನ್ನಿಧಿಯಲ್ಲಿ ಶ್ರೀಮಂತಿಕೆಯನ್ನು ಹಣದಿಂದ ಅಳೆಯಲಾಗದು. ಅವರ ಭಕ್ತಿ, ಭಾವ, ಶ್ರದ್ಧೆ ಯಿಂದ ಮಾತ್ರ ಅಳೆಯಲು ಸಾಧ್ಯ. ಪೋಷಕರು ತಮ್ಮ ಮಕ್ಕಳನ್ನು ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರಚೋಧನೆ ನೀಡಬೇಕು. ಪ್ರಾಣಿ, ಪಕ್ಷಿಗಳ ಮೇಲೆ ಮನುಷ್ಯನ ದಯೆ ಇರಬೇಕು. ದಯೆಯೇ ಧರ್ಮದ ಮೂಲವಾಗಿದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ಅರವಿಂದ ಆಚಾರ್ ಮಾತನಾಡಿ, ಮನೆ, ಮನಗಳಲ್ಲಿ ಗುಡಿಸಲುಗಳಲ್ಲಿ ಇದ್ದ ಅಯ್ಯಪ್ಪಸ್ವಾಮಿ ಈಗ ನಿಮ್ಮಲ್ಲರ ಸಹಕಾರದಿಂದ ಭವ್ಯ ದೇಗುಲದಲ್ಲಿ ನೆಲೆಸಿದ್ದಾನೆ. ದೇಗುಲಗಳಿಗೆ ವಾರಕ್ಕೆ ಒಮ್ಮೆಯಾದರೂ ಸತ್ಸಂಗ, ಪ್ರವಚನ, ಭಜನಾ ಕಾರ್ಯಕ್ರಮ ನಡೆಯುತ್ತಿರಬೇಕು. ಆಗ ದೇವಾಲಯ ಮಾತ್ರ ವಲ್ಲದೆ ಊರು ಸಹ ಅಭಿವೃದ್ಧಿ ಹೊಂದಲಿದೆ. ಗ್ರಾಮದಲ್ಲಿ ಶಾಂತಿ,ನೆಮ್ಮದಿ ನೆಲಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳಿಂದ ಸಂಕ್ರಾಂತಿ ಎಳ್ಳು, ಬೆಲ್ಲ ಹಾಗೂ ಹಣ್ಣನ್ನು ವಿತರಿಸಲಾಯಿತು. ದೇವಾಲಯಕ್ಕೆ ಆಗಮಿಸಿದ ಶ್ರೀಗಳನ್ನು ಮಾಲೆ ಹಾಕಿದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪಾದ ಪೂಜೆ ಸಲ್ಲಿಸಿ ದೇಗುಲಕ್ಕೆ ಸ್ವಾಗತಿಸಿದರು. ಪ್ರಧಾನ ಅರ್ಚಕ ಸುರೇಶ್ ಭಟ್ ವಿಶೇಷ ಪೂಜೆ ನೆರವೇರಿಸಿದರು.ಸಭೆಯಲ್ಲಿ ದೇವಾಲಯ ಸಮಿತಿ ಗೌರವಾಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಉಪಾಧ್ಯಕ್ಷ ಎಸ್.ಎಸ್.ಶ್ರೀನಿವಾಸ್, ಎಂ.ಮೋಹನ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಕಾರ್ಯದರ್ಶಿ ಜಯರಾಮ್, ಸಹ ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪ್ರಭಾಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಬಿ.ಮಂಜುನಾಥ್, ಶೈಲಾ ಮಹೇಶ್,ವಾಣಿ ನರೇಂದ್ರ, ದೇವಸ್ಥಾನ ಸಮಿತಿ ಸದಸ್ಯರಾದ ಎನ್.ಎಂ.ಕಾಂತರಾಜ್, ಎ.ಬಿ.ಚಂದ್ರಶೇಖರ್,ಸುಧಾಕರ್,ಎ.ಡಿ.ಉಮೇಶ್, ಪೂರ್ಣೇಶ್, ಮಣಿಕಂಠ ಮಹಿಳಾ ಸಂಘದ ಅಧ್ಯಕ್ಷೆ ಸುನಂದ,ಸದಸ್ಯರಾದ ಭಾರತಿ,ಪುಷ್ಪ, ದಾನಮ್ಮ,ಶಾಲಿನಿ, ಗಾಯಿತ್ರಿ, ಹೊನ್ನಮ್ಮ, ವಿಮಲ, ಹೇಮಾವತಿ,ಮಮತಾ, ಸುಮಿತ್ರಾ, ದೇವಸ್ಥಾನ ಸಮಿತಿ ಮಾಜಿ ಕಾರ್ಯದರ್ಶಿ ಶೆಟ್ಟಿಕೊಪ್ಪ ಮಹೇಶ್ ಮತ್ತಿತರರು ಇದ್ದರು.