ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಹಾಗೂ ಕ್ಯಾತನಹಳ್ಳಿ ರಾಮಣ್ಣ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಜಾನಪದ ಸಾಹಿತ್ಯ ಚರಿತ್ರೆಯ ಪ್ರಥಮ ಪ್ರತಿ ಸ್ವೀಕರಿಸಿ ಮಾತನಾಡಿದರು.
ಸರ್ಕಾರ ಈ ಅಕಾಡೆಮಿ, ಪರಿಷತ್ತುಗಳಿಗೆ ಕೋಟ್ಯಂತರ ರು. ಅನುದಾನ ನೀಡುತ್ತಿವೆ. ಹಾಗಾಗಿ ಜಾನಪದ ಕುರಿತ ಯೋಜನೆಗಳ ಕೆಲಸ ಶೀಘ್ರಗತಿಯಲ್ಲಿ ನಡೆಯಬೇಕು. ಸಾಹಿತ್ಯ ಚರಿತ್ರೆ ಕೆಲಸ ನಿಲ್ಲಬಾರದು. ಅದು ಪರಿಷ್ಕರಣೆಯಾಗುತ್ತಿರಬೇಕು ಎಂದು ನುಡಿದರು.ನಾನು ಕುಲಪತಿಯಾಗಿದ್ದ ಸಮಯದಲ್ಲಿ ೧೬ ಗ್ರಂಥ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಹತ್ತು ಸಂಪುಟದ ಗ್ರಾಮ ಚರಿತೆ ಕೋಶ, ಹಾವೇರಿ ಜಿಲ್ಲಾ ಕ್ಷೇತ್ರ ಸವೇಕ್ಷಣೆ, ಲಂಬಾಣಿ ಸಂಸ್ಕೃತಿ ಕೋಶ, ಪದ ಸಂಸ್ಕೃತಿ ಕೋಶ ಇನ್ನಿತರ ಕೆಲವು ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಸಿಗಲಿಲ್ಲ ಎಂದು ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಮಾತನಾಡಿ, ಜಾನಪದ ವಿವಿ ಗ್ರಾಮಚರಿತೆ ಕೋಶಕ್ಕೆ ಸಂಬಂಧಪಟ್ಟಂತಹ ೧೦ ಕೋಟಿ ರು.ವೆಚ್ಚದ ಬೃಹತ್ ಯೋಜನೆಯಾಗಿ ೧೭ ಜಿಲ್ಲೆಯ ಗ್ರಾಮಚರಿತ್ರೆ ಕೋಶಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಉಳಿದ ಜಿಲ್ಲೆಗಳಿಗೆ ಸಂಬಂಧಪಟ್ಟಂತ ಕೆಲಸ ಪ್ರಾರಂಭಗೊಂಡು ಮುಕ್ತಾಯದ ಹಂತದಲ್ಲಿವೆ. ಸರ್ಕಾರದಿಂದ ೨.೧೭ ಕೋಟಿ ರು. ಹಣ ಬಿಡುಗಡೆ ಹಂತದಲ್ಲಿದೆ. ಬಿಡುಗಡೆಯಾದ ಒಂದು ತಿಂಗಳಲ್ಲಿ ಎಲ್ಲಾ ಜಿಲ್ಲೆಯ ಗ್ರಾಮ ಚರಿತ್ರೆ ಕೋಶಗಳು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಮಂಡ್ಯ ಕೇಂದ್ರ ಮತ್ತೆ ಆರಂಭ: ಕೋವಿಡ್ ಸಮಯದಲ್ಲಿ ಮಂಡ್ಯದಲ್ಲಿ ಸ್ಥಗಿತವಾಗಿರುವ ಅಧ್ಯಯನ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು. ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪುನರಾರಂಭ ಮಾಡುವುದಾಗಿ ಹೇಳಿದರು.
ಈ ಪುಸ್ತಕದ ೨೫ ಅಧ್ಯಾಯಗಳಲ್ಲಿ ವಿವಿಧ ಪ್ರಕಾರಗಳನ್ನು ಇಟ್ಟುಕೊಂಡು ಸಮಗ್ರವಾದ ಮಾಹಿತಿಯನ್ನು ಕೊಡುವ ಕೆಲಸವನ್ನು ಮಾಡಿದ್ದಾರೆ. ಕ್ಷೇತ್ರಕಾರ್ಯ, ಗಾದೆ, ಒಗಟು,ಒಡಪು, ಕಾವ್ಯ, ಆಟ, ನಂಬಿಕೆ,ಗಣಿತ, ಆತ್ಮಕಥನ, ಬೈಗಳು ಯಕ್ಷಗಾನ ಮುಂತಾದ ವಿಂಗಡಣೆಗಳಿವೆ.ಇದು ಸಂಶೋಧಕರಿಗೆ ಉಪಯುಕ್ತವಾದ ಕೃತಿ. ಇದನ್ನು ಅಧ್ಯಯನ ಮಾಡಿದರೆ ಪ್ರತಿಯೊಂದು ಪ್ರಕಾರದಲ್ಲಿ ವಿಶೇಷ ಸಂಶೋಧನೆ ಮಾಡಲು ಆಕರ ಗ್ರಂಥವಾಗಿ ಬಳಸಬಹುದು. ಭಾಷೆಯನ್ನು ಸಹ ಅದ್ಭುತವಾಗಿ ಬಳಸಿದ್ದಾರೆ. ಸುಲಭವಾಗಿ ಗ್ರಹಿಸುವ ಹಾಗೆ ಬರೆದಿದ್ದಾರೆ. ೧೯೨೪ ರಿಂದ ೨೦೨೩ ರವರೆಗಿನ ದಾಖಲೆಗಳನ್ನು ಕೊಡುತ್ತಾರೆ. ಬಹಳ ಶ್ರದ್ಧೆಯಿಂದ ಮಾಡಬೇಕಾದ ಕೆಲಸ ಅಂತ ಪರಿಶ್ರಮಪಟ್ಟು ಬಹಳ ಸುದೀರ್ಘವಾದ ಕ್ಷೇತ್ರಕಾರ್ಯವನ್ನು ಮಾಡಿರುವುದು ಗೊತ್ತಾಗುತ್ತದೆ ಎಂದರು.