ಕನ್ನಡಪ್ರಭ ವಾರ್ತೆ ಕೊಡೇಕಲ್
ಕೊಡೇಕಲ್ ಹೋಬಳಿ ವಲಯದ ಯಣ್ಣಿ ವಡಿಗೇರಿ ಗ್ರಾಮಸ್ಥರು ಒಂದು ಕೊಡ ನೀರು ಪಡೆಯಲು ರಾತ್ರಿಯೆಲ್ಲ ಚಾತಕಪಕ್ಷಿಯಂತೆ ಕಾಯುವ ಸ್ಥಿತಿಯನ್ನು ಅನುಭವಿಸುವಂತಾಗಿದೆ. ಅಂದಾಜು 2 ಸಾವಿರಕ್ಕಿಂತಲು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಯಣ್ಣಿವಡಿಗೇರಿ ಗ್ರಾಮದಲ್ಲಿ ಜಲಮೂಲಗಳಲ್ಲಿ ಅಂತರ್ಜಲಮಟ್ಟ ಗಣನೀಯವಾಗಿ ಕುಸಿತವಾಗುತ್ತಿರುವ ಕಾರಣ ಗ್ರಾಮದ ಜನತೆ ನೀರಿಗಾಗಿ ಬವಣೆಯನ್ನು ಪಡುತ್ತಿದ್ದಾರೆ.
ಅಂತರ್ಜಲಮಟ್ಟ ಕುಸಿತ: ಗ್ರಾಮದ ಜನತೆಗೆ ಕುಡಿಯುವ ನೀರಿಗೆ ಆಸರೆಯಾಗಿದ್ದ ಪುರಾತನ ಕಾಲದ ಸೇದಿಬಾವಿಯಲ್ಲಿ ಅಂತರ್ಜಲಮಟ್ಟ ಕುಸಿತವಾಗಿತ್ತು. ಕಾರಣ, ನಾಲ್ಕು ವರ್ಷಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಬಾವಿಯೊಂದನ್ನು ತೋಡಿ, ಬಾವಿಯಿಂದ ಪೈಪ್‌ಲೈನ ಮಾಡುವ ಮೂಲಕ ಗುಮ್ಮಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.ಆದರೆ, ಒಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯ ಕಾರಣದಿಂದಾಗಿ ಗುಮ್ಮಿಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗದೆ ಹೋದರೆ, ಇನ್ನೊಂದಡೆ ಬಾವಿಯಲ್ಲಿ ನೀರು ತುಂಬಿಕೊಳ್ಳುವರೆಗೆ ಗ್ರಾಮದ ಜನತೆ ಒಂದು ಬಿಂದಿಗೆ ನೀರು ಪಡೆಯಲು ಗುಮ್ಮಿಗಳ ಮುಂದೆ ಹರಸಾಹಸ ಪಡುವಂತಾಗಿದೆ.
ಇದರಿಂದಾಗಿ ನಿತ್ಯ ಹೊಲ ಮನೆ ಕೆಲಸಗಳಿಗೆ ತೆರಳುವ ಗ್ರಾಮದ ಜನತೆ ನೀರು ತರುವ ಒತ್ತುಗಾಡಿಗಳನ್ನು ಗುಮ್ಮಿಗಳ ಮುಂದೆ ನಿಲ್ಲಿಸಿ ಮನೆಯಲ್ಲಿರುವ ಹಿರಿಯರನ್ನು ಗುಮ್ಮಿಗಳ ಮುಂದೆ ಕೂಡಿಸಿ ಕೆಲಸಕ್ಕೆ ತೆರಳುತ್ತಾರೆ ಒಂದು ವೇಳೆ ಸಂಜೆ ವರೆಗೂ ಕರೆಂಟ್ ಬರದಿದ್ದರೆ ಇಡಿ ರಾತ್ರಿ ಗ್ರಾಮದ ಜನತೆ ಗುಮ್ಮಿಗಳ ಮುಂದೆ ನೀರು ಪಡೆಯಲು ನಿದ್ದೆಯನ್ನು ಮಾಡದೆ ಜಾಗರಣೆಯನ್ನು ಮಾಡಬೇಕಾಗಿದೆ ಎಂದು ಹೇಳುತ್ತಾರೆ ಗ್ರಾಮದ ಹಿರಿಯರಾದ ಯಮನಪ್ಪ, ಧರೆಪ್ಪ .
ಗಮನ ಹರಿಸದ ಗ್ರಾ.ಪಂ: ಕಳೆದ ಹಲವು ವರ್ಷಗಳಿಂದ ಯಣ್ಣಿವಡಿಗೇರಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವ ವಿಷಯ ಗೊತ್ತಿರುವ ಗ್ರಾ.ಪಂನವರು ಮಾತ್ರ ಇದಕ್ಕೂ ನಮಗೂ ಯಾವುದೆ ರೀತಿಯ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಮೌನಕ್ಕೆ ಶರಣರಾಗಿರುವುದು ಗ್ರಾಮದ ಜನರ ಕಾಡುತ್ತಿದೆ.