ಭಾಲ್ಕಿ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸುವವರೆಗೆ ನಿರಂತರವಾಗಿ ಪ್ರತಿಭಟನೆ ಮುಂದುವರೆಯಲಿದೆ ಎಂದು ಮಲ್ಲಿಕಾರ್ಜುನಸ್ವಾಮಿ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕಿರಣಕುಮಾರ ಖಂಡ್ರೆ ಹೇಳಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಭಾಲ್ಕಿ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸುವವರೆಗೆ ನಿರಂತರವಾಗಿ ಪ್ರತಿಭಟನೆ ಮುಂದುವರೆಯಲಿದೆ ಎಂದು ಮಲ್ಲಿಕಾರ್ಜುನಸ್ವಾಮಿ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕಿರಣಕುಮಾರ ಖಂಡ್ರೆ ಹೇಳಿದರು.
ಅವರು ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ಮಂಗಳವಾರದಿಂದ ನಿರಂತರ ಧರಣಿ ನಡೆಸುತ್ತಿರುವ ರೈತ ಮುಂಖಡರನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳು ಬರ ಪೀಡಿತವಾಗಿವೆ. ಆದರೆ ನಾಲ್ಕು ತಾಲೂಕುಗಳು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿ, ಭಾಲ್ಕಿ ಸೇರಿದಂತೆ ಇನ್ನುಳಿದ ನಾಲ್ಕು ತಾಲೂಕು ಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಿಂದ ಭಾಲ್ಕಿ ತಾಲೂಕಿನ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಭಾಲ್ಕಿ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸುವವರೆಗೆ ನಿರಂತರ ಹೋರಾಟ, ಧರಣಿ ಸತ್ಯಾಗ್ರಹ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಕಾಶೀನಾಥ ಭೂರೆ ಮಾತನಾಡಿ, ಬರಪೀಡಿತ ಪಟ್ಟಿಯಿಂದ ತಾಲೂಕು ಹೊರಗಿಟ್ಟಿರುವುದು ಈ ಭಾಗದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ನಾಗಶೆಟ್ಟೆಪ್ಪ ಲಂಜವಾಡೆ, ಜೈರಾಜ ಕೊಳ್ಳಾ, ಕಲ್ಯಾಣರಾವ್ ಪಾಟೀಲ್ ಸಂಗಮ್, ಭವರಾವ್ ನೆಲವಾಡೆ, ಮಲ್ಲಿಕಾರ್ಜುನ ಬಿರಾದಾರ್, ಅಶೋಕ ಕಾರಬಾರಿ ಗೋರಚಿಂಚೋಳಿ, ರಾಜೇಂದ್ರ ಪಾಟೀಲ್, ಪ್ರಹ್ಲಾದರಾವ್ ಬಿರಾದಾರ, ಮಾಣಿಕಪ್ಪ ಮಸ್ಕಲೆ, ರಿಯಾಜ್ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.