ಜೈಲಿನಲ್ಲಿ ಡಿಜಿಪಿ ಓಂ ಪ್ರಕಾಶ್ ಪತ್ನಿ ನಿಯಂತ್ರಣಕ್ಕೆ ಹರಸಾಹಸ

KannadaprabhaNewsNetwork |  
Published : Apr 29, 2026, 01:45 AM IST
ಆರೋಪಿ ಪಲ್ಲವಿ  | Kannada Prabha

ಸಾರಾಂಶ

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ ನಡೆದು ಒಂದು ವರ್ಷವಾಗಿದ್ದು, ಪತಿ ಓಂ ಪ್ರಕಾಶ್‌ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಪಲ್ಲವಿಯನ್ನು ನಿಯಂತ್ರಿಸುವುದೇ ಜೈಲು ಅಧಿಕಾರಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ ನಡೆದು ಒಂದು ವರ್ಷವಾಗಿದ್ದು, ಪತಿ ಓಂ ಪ್ರಕಾಶ್‌ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಪಲ್ಲವಿಯನ್ನು ನಿಯಂತ್ರಿಸುವುದೇ ಜೈಲು ಅಧಿಕಾರಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.

2025ರ ಏ.20ರಂದು ಎಚ್‌ಎಸ್‌ಆರ್‌ ಲೇಔಟ್‌ ನಿವಾಸದಲ್ಲಿ ವಾಸವಿದ್ದ ನಿವೃತ್ತ ಡಿಜಿಪಿ ಓಂ ಪ್ರಕಾಶ್ (68) ಅವರ ಮೇಲೆ ಪತ್ನಿ ಪಲ್ಲವಿ ಖಾರದಪುಡಿ ಎರಚಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು. ಆಸ್ತಿ ವಿವಾದ ಮತ್ತು ಕೌಟುಂಬಿಕ ಕಲಹ, ಮತ್ತು ಮಾನಸಿಕ ಅಸ್ಥಿರತೆ ಹತ್ಯೆಗೆ ಕಾರಣ ಎನ್ನಲಾಗಿತ್ತು. ಕೊಲೆ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಪಲ್ಲವಿ ಅವರು ಜೈಲಿನಲ್ಲಿದ್ದು, ಮಾನಸಿಕವಾಗಿ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಪಲ್ಲವಿ ಅವರನ್ನು ನಿಯಂತ್ರಿಸುವುದೇ ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಿರುಚಾಟ, ಕೂಗಾಟ ನಡೆಸುವುದು ಹೆಚ್ಚಾಗಿದೆ. ಕಳೆದ 2 ತಿಂಗಳಿಂದ ಮಾನಸಿಕ ವಿಚಿತ್ರ ವರ್ತನೆ ಇನ್ನಷ್ಟು ತೀವ್ರಗೊಂಡಿದ್ದು, ಪಲ್ಲವಿ ಅವರ ಮಾನಸಿಕ ಸ್ಥಿತಿ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಪರಿಸ್ಥಿತಿ ನಿಭಾಯಿಸಲು ಸಿಬ್ಬಂದಿ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಪಲ್ಲವಿ ಜತೆ ಒಂದೇ ಬ್ಯಾರಕ್‌ನಲ್ಲಿ ಇರುವ ಕೆಲ ಮಹಿಳಾ ವಿಚಾರಾಣಾಧೀನ ಕೈದಿಗಳು ಕೂಡ ಭಯಭೀತರಾಗಿದ್ದು, ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.

ಪಲ್ಲವಿ ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪ್ರತಿ 15 ದಿನಕ್ಕೊಮ್ಮೆ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿ ವೈದ್ಯರು ಕೌನ್ಸೆಲಿಂಗ್ ಸೇರಿ ಅಗತ್ಯ ಚಿಕಿತ್ಸೆ ನೀಡುತ್ತಿದ್ದು, ಮಾನಸಿಕ ಸಮಸ್ಯೆಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ ಕೆಲ ಸಂದರ್ಭಗಳಲ್ಲಿ ಪಲ್ಲವಿ ಆಸ್ಪತ್ರೆಗೆ ಹೋಗಲು ಸಹ ನಿರಾಕರಿಸುತ್ತಿದ್ದು, ಇದರಿಂದ ಸಿಬ್ಬಂದಿಗೆ ಮತ್ತಷ್ಟು ಸಂಕಷ್ಟ ಉಂಟಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜೈಲು ಸಿಬ್ಬಂದಿಯೇ ಅವರನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.

ನೋಡಲು ಬಾರದ ಮಕ್ಕಳು!:

ಪಲ್ಲವಿ ಅವರ ಮಾನಸಿಕ ಸ್ಥಿತಿಗೆ ಕುಟುಂಬ ದೂರವಾಗಿರುವುದೂ ಒಂದು ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇವರನ್ನು ಕಳೆದ ಒಂದು ವರ್ಷದಿಂದ ಮಗ ಮತ್ತು ಮಗಳು ಭೇಟಿಯಾಗಿಲ್ಲ. ಕುಟುಂಬದ ಸಂಪರ್ಕವೂ ಕಡಿಮೆಯಾಗಿದೆ. ಈ ಕಾರಣದಿಂದಲೇ ಅವರು ಇನ್ನಷ್ಟು ಒಂಟಿತನಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಕೆಲ ಹಿರಿಯ ಐಪಿಎಸ್ ಅಧಿಕಾರಿಗಳು ಮಾನವೀಯತೆಯ ದೃಷ್ಟಿಯಿಂದ ಪಲ್ಲವಿ ಅವರ ಮಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒತ್ತಡ ನಿರ್ವಹಣೆಗೆ ವ್ಯಕ್ತಿತ್ವ ವಿಕಸನ ಪೂರಕ
ಕನ್ನಡ ಪಠ್ಯಪುಸ್ತಕ ಸರಳೀಕರಣಕ್ಕೆ ಇಲಾಖೆ ಚಿಂತನೆ