ಕಳೆದ ಕೆಲವು ದಿನಗಳಿಂದ ಗುಡಿಬಂಡೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದೆ.
ಬಾಲಾಜಿ ಆರ್. ಗುಡಿಬಂಡೆ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಯುದ್ಧದ ಕಾರ್ಮೋಡ ಈಗ ಗುಡಿಬಂಡೆ ತಾಲೂಕಿಗೂ ವ್ಯಾಪಿಸಿದೆ. ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನೇರ ಪರಿಣಾಮ ಸ್ಥಳೀಯ ಅಡುಗೆ ಅನಿಲ (ಎಲ್‌ಪಿಸಿ) ಪೂರೈಕೆಯ ಮೇಲೆ ಬಿದ್ದಿದ್ದು, ಸಾರ್ವಜನಿಕರು ಸಿಲಿಂಡರ್‌ಗಾಗಿ ಪರದಾಡುವಂತಾಗಿದೆ.
ಕಳೆದ ಕೆಲವು ದಿನಗಳಿಂದ ಗುಡಿಬಂಡೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಸ್ಥಳೀಯ ವಿತರಕರ ಮೇಲೆಯೂ ಪರಿಣಾಮ ಬೀರಿದೆ. ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ದಿನಗಟ್ಟಲೆ ಕಾಯುತ್ತಿದ್ದರೂ, ಸಿಲಿಂಡರ್ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ತಾಂತ್ರಿಕ ದೋಷ ಹಾಗೂ ಬುಕಿಂಗ್ ಸಮಸ್ಯೆ:
ಸಾಮಾನ್ಯವಾಗಿ ಗ್ಯಾಸ್ ಕಂಪನಿಗಳು ತಿಳಿಸಿರುವಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಹಲವು ವಿಧಾನಗಳನ್ನು ಪರಿಚಯಿಸಿದೆ. ಗ್ಯಾಸ್ ಎಮರ್ಜೆನ್ಸಿ ಕಾರಣದಿಂದಾಗಿ ಗ್ಯಾಸ್ ಬುಕ್ ಮಾಡುವ ಯಾವುದೇ ವಿಧಾನ ಕೆಲಸ ಮಾಡುತ್ತಿಲ್ಲ. ಎಷ್ಟು ಬಾರಿ ಪ್ರಯತ್ನಪಟ್ಟರೂ ಸಹ ನಿರಾಸೆ ಬಿಟ್ಟರೇ ಕಂಪನಿಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ಅದರಲ್ಲೂ ಕೆಲವರಂತೂ ಇಡೀ ರಾತ್ರಿ ಪ್ರಯತ್ನ ಮಾಡಿ ಒಟಿಪಿಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಒಂದು ಮಾದರಿಯಲ್ಲಿ ಕೋವಿಡ್ ಲಾಕ್‌ಡೌನ್‌ನಲ್ಲಿ ಪರದಾಡಿದಂತಿದೆ ಎಂದು ಹೇಳಬಹುದಾಗಿದೆ.
ಕೃತಕ ಅಭಾವದ ಭೀತಿ:
ಇನ್ನೂ ಈ ಕುರಿತು ಗ್ರಾಹಕರು ತಮ್ಮ ನೋವನ್ನು ಹಂಚಿಕೊಂಡಿದ್ದು, ಯುದ್ಧದ ಸುದ್ದಿಯಿಂದಾಗಿ ಪೂರೈಕೆ ಕಡಿಮೆಯಾಗಬಹುದು ಎಂಬ ಭೀತಿಯಲ್ಲಿ ಅನೇಕರು ಮುಂಗಡವಾಗಿ ಸಿಲಿಂಡರ್ ಕಾಯ್ದಿರಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಕೃತಕ ಅಭಾವವೂ ಸೃಷ್ಟಿಯಾಗುತ್ತಿದೆ. ಒಂದೆಡೆ ಬೆಲೆ ಏರಿಕೆಯ ಭೀತಿ, ಮತ್ತೊಂದೆಡೆ ಸಿಲಿಂಡರ್ ಸಿಗದ ಪರಿಸ್ಥಿತಿ. ಅಡುಗೆ ಮಾಡಲು ಸೌದೆ ಒಲೆಯನ್ನೇ, ವಿದ್ಯುತ್ ಚಾಲಿತ ಸ್ಟೌವ್‌ಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಸ್ಯೆ ಬಗೆಹರಿಯುವುದಾದರೂ ಯಾವಾಗ ಎಂಬ ಚಿಂತೆ ನಮಗೆ ಕಾಡುತ್ತಿದೆ ಎಂದು ನೋವು ಹಂಚಿಕೊಂಡಿದ್ದಾರೆ.
ಈ ಕುರಿತು ಗುಡಿಬಂಡೆ ಇಂಡೇನ್ ಗ್ಯಾಸ್ ಏಜೆನ್ಸಿ ಮಾಲೀಕ ಮಂಜುನಾಥ್ ಮಾತನಾಡಿ, ಯುದ್ದದ ಕಾರಣದಿಂದ ನಮಗೆ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಇದರ ಜೊತೆಗೆ ಸರ್ವರ್ ಸಮಸ್ಯೆಯಾಗುತ್ತಿದ್ದು, ಯಾವುದೇ ಬುಕಿಂಗ್ ಆಗುತ್ತಿಲ್ಲ. ಜನರು ಸಹ ಗ್ಯಾಸ್ ಅಭಾವ ಉಂಟಾಗುತ್ತದೆ ಎಂಬ ಕಾರಣದಿಂದ ಡಬಲ್ ಸಿಲಿಂಡರ್ ಇರುವಂತಹವರು ಗ್ಯಾಸ್ ಬುಕಿಂಗ್ ಮಾಡಿಕೊಂಡು ಸ್ಟೋರ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ. ಕಂಪನಿ ಸಹ ನಮಗೆ ಮೊದಲಿನಂತೆ ಸಿಲಿಂಡರ್ ಪೂರೈಕೆ ಆಗುತ್ತಿಲ್ಲ. ವಾಣಿಜ್ಯ ಬಳಕೆ ಸಿಲಂಡರ್ ಪೂರೈಕೆ ನಿಲ್ಲಿಸಿದ್ದಾರೆ. ಜನರು ಸಹ ಆದಷ್ಟು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಿ ಎಂದು ಮನವಿ ನೀಡಿದರು.
12ಜಿಯುಡಿ2: ಗುಡಿಬಂಡೆ ಪಟ್ಟಣದ ಇಂಡೇನ್ ಗ್ಯಾಸ್ ಏಜೆನ್ಸಿ ಬಳಿ ಗ್ಯಾಸ್ ಪಡೆಯಲು ಕಾಯುತ್ತಿರುವ ಗ್ರಾಹಕರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.