ವಿದ್ಯಾರ್ಥಿನಿ ಆತ್ಮಹತ್ಯೆ: ಪೋಷಕರ, ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Aug 10, 2025, 02:00 AM IST
ಫೋಟೋ: 9 ಜಿಎಲ್ ಡಿ2- ಮೃತ ವಿದ್ಯಾರ್ಥಿನಿಯ ಸಹೋದರ ಶಿವಕುಮಾರ, ತಾಯಿ ಮತ್ತು ಚಿಕ್ಕಮ್ಮ   | Kannada Prabha

ಸಾರಾಂಶ

ವಿದ್ಯಾರ್ಥಿನಿ ಆತ್ಮಹತ್ಯೆ ಹಿನ್ನೆಲೆ ವಿದ್ಯಾರ್ಥಿನಿಯ ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಆಕೆ ವ್ಯಾಸಂಗ ಮಾಡುತ್ತಿದ್ದ ಕಾಲೇಜಿಗೆ ತೆರಳಿ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ವಿದ್ಯಾರ್ಥಿನಿ ಆತ್ಮಹತ್ಯೆ ಹಿನ್ನೆಲೆ ವಿದ್ಯಾರ್ಥಿನಿಯ ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಆಕೆ ವ್ಯಾಸಂಗ ಮಾಡುತ್ತಿದ್ದ ಕಾಲೇಜಿಗೆ ತೆರಳಿ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಅಲ್ಲದೆ ಆಡಳಿತ ಮಂಡಳಿ, ಸಿಬ್ಬಂದಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ನಮ್ಮ ಮಕ್ಕಳಿಗೆ ರಕ್ಷಣೆ ಇಲ್ಲದಿದ್ದರೆ ಹೇಗೆ? ಎಂದು ಆಕ್ರೋಶ ಹೊರ ಹಾಕಿದರು. ಬಿಕ್ಕಿ ಬಿಕ್ಕಿ ಅತ್ತ ಅಣ್ಣ: ಮೈಸೂರಿನಲ್ಲಿ ಕೋಚಿಂಗ್ ಪಡೆಯುತ್ತಿದ್ದೇನೆ. ರಾಖಿ ಹಬ್ಬ ಐತಿ, ನಿನಗೆ ರಾಖಿ ಕಳಿಸಿನಿ, ನೀ ಚಲೋತಂಗ್ ಓದಿಕೋ, ಆರಾಮ ಇರು, ಏನಾದರೂ ಬೇಕಾದ್ರ ಫೋನ್ ಮಾಡು, ಅಂತ ನನ್ನ ಜೊತೆಗೆ ಮೊನ್ನೆ ಒಂದು ಗಂಟೆ ಮಾತಾಡಿದ್ದಳು...ಬಿಕ್ಕಿ ಬಿಕ್ಕಿ ಅತ್ತ ಮೃತಳ ಸಹೋದರ ಶಿವಕುಮಾರ ನನ್ನ ತಂಗಿ ನನಗೇ ಧೈರ್ಯ ಹೇಳುತ್ತಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹಿಂಸೆಯಾಗಿದೆ ಎಂದರೆ, ಎಷ್ಟು ಕಿರುಕುಳ ಕೊಟ್ಟಿರಬೇಕು? ಅವಳ ಸಾವಿನ ಸುದ್ದಿ ನನಗೆ ಶಾಕ್ ಮೂಡಿಸಿದೆ. ಕಾಲೇಜಿನವರದ್ದು ನಿರ್ಲಕ್ಷ್ಯ ಇದೆ. ಇಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ. ಶಿಸ್ತು ಎನ್ನುವುದೇ ಇಲ್ಲ. ನನ್ನ ತಂಗಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ:ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಸಿಗಬೇಕು. ಆ ಕುಟುಂಬಕ್ಕೆ ಕಾಲೇಜಿನಿಂದ ಪರಿಹಾರ ಕೊಡಬೇಕು. ಸೋಮವಾರ ಕಾಲೇಜಿನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕು. ಈ ಬೇಡಿಕೆಗೆ ಸ್ಪಂದಿಸದಿದ್ದರೆ ಗುಳೇದಗುಡ್ಡ ಬಂದ್ ಮಾಡಿ, ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಸಿಗುವವರೆಗೂ ಎಬಿವಿಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ ಎಂದು ಎಬಿವಿಪಿ ಪ್ರಾಂತ ಸಂಚಾಲಕ ಪ್ರಥಮೇಶ ವಾಘಮೋಡೆ ಹೇಳಿದ್ದಾರೆ.

ತಪ್ಪಿತಸ್ತರ ವಿರುದ್ಧ ಶಿಸ್ತುಕ್ರಮ: ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಇನ್ಮುಂದೆ ಕಾಲೇಜಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಿಸ್ತು ಕ್ರಮಕ್ಕೆ ಮುಂದಾಗುತ್ತೇವೆ. ಸೋಮವಾರ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ ಮಾಡುತ್ತೇವೆ ಎಂದು ಆಡಳಿತ ಮಂಡಳಿ ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಮ್ಮ ಮಗಳು ಯಾವ ಉಸಾಬರಿಗೆ ಹೋದವಳಲ್ಲ. ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿನಿಯಾಗಿದ್ದಳು. ದೊಡ್ಡ ಕನಸು ಕಂಡಿದ್ದಳು. ಸಹಪಾಠಿಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಏನು ಮಾಡುತ್ತಾರೆ. ಯಾರು ಬಂದ್ರು, ಯಾರು ಹೋದ್ರು, ಏನಾಗುತ್ತಿದೆ ಎಂಬುದರ ಬಗ್ಗೆ ಕಾಲೇಜಿನವರು ಗಮನ ಹರಿಸಬೇಕು. ಆದರೆ ಇದ್ಯಾವುದನ್ನು ಕಾಲೇಜಿನವರು ಮಾಡಿಲ್ಲ. ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು ಯಾರು ಎಂಬುವುದೇ ಪ್ರಾಚಾರ್ಯರಿಗೆ ಸರಿಯಾದ ಮಾಹಿತಿ ಇಲ್ಲ. ನನ್ನ ಮಗಳಿಗೆ ತೊಂದರೆ ಕೊಟ್ಟವರಿಗೆ ಶಿಕ್ಷೆಯಾಗಲೇಬೇಕು.

-ರಾಜೇಶ್ವರಿ ಮುಂಡಾಸದ ತಾಯಿ, ಮಲ್ಲಮ್ಮ ಚಿಕ್ಕಮ್ಮ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ