ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರಸಮೀಪದ ಗೊಜನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿಯ ಶಾಲೆಯ ವಿದ್ಯಾರ್ಥಿಗಳಿಗೆ ಹೊದಿಕೆ ಹಾಗೂ ಹಾಸಿಗೆಯನ್ನು ಕಳೆದ ಮೂರ ವರ್ಷಗಳಿಂದ ನೀಡಿಲ್ಲ.
ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 250 ವಿದ್ಯಾರ್ಥಿಗಳು ಇದ್ದು, ಕಳೆದ 3 ವರ್ಷಗಳಿಂದ ಹೊದಿಕೆ ಹಾಗೂ ಹಾಸಿಗೆಯನ್ನು ನೀಡಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಣ್ಣನೆಯ ಕಾಟ್‌ಗಳ ಮೇಲೆ ಮಲಗಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಒಂದು ವರ್ಷದಿಂದ ಪ್ರತಿವರ್ಷ ಪೇಸ್ಟ್, ಸೋಪು, ಬಟ್ಟೆ ಸೋಪು, ಕೊಬ್ಬರಿ ಎಣ್ಣೆಯ ಬಾಟಲ್ ಇರುವ ಕಿಟ್ ಅನ್ನು
ನೀಡಿಲ್ಲ. ಆದ್ದರಿಂದ ಬಡ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸುಮಾರು ₹200 ಹೊರೆಯಾಗುತ್ತಿದೆ. ಗೊಜನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕಟ್ಟಡ ಅಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ವಸತಿ ನಿಲಯದ ಬಾಲಕರ ನೆಲಮಟ್ಟದ ಕಟ್ಟಡ ನಾಲ್ಕು ಹಾಗೂ ಬಾಲಕಿಯರ ನೆಲಮಟ್ಟದ ಕಟ್ಟಡದಲ್ಲಿ ನಾಲ್ಕು ಕೊಠಡಿಗಳು ಪೂರ್ಣಗೊಂಡಿವೆ.
ಪ್ರತಿ ಕೊಠಡಿಯಲ್ಲಿ ಸುಮಾರು 16 ವಿದ್ಯಾರ್ಥಿಗಳಿಗೆ ವಿಶ್ರಾಂತಿ ಪಡೆಯಲು ಕಾಟ್‌ಗಳನ್ನು ಹಾಕಬೇಕು. ಆದರೆ ಇಲ್ಲಿ 28 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ನೀಡಿದ್ದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹಾಗೂ ವಿಶ್ರಾಂತಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈಗಿರುವ ನೆಲ ಮಟ್ಟದ ಕಟ್ಟಡದ ಮೇಲೆ ಬಾಲಕರಿಗೆ ಹಾಗೂ ಬಾಲಕಿಯರಿಗೆ ಕೊಠಡಿಗಳನ್ನು ನಿರ್ಮಿಸುವ ಅವಕಾಶವಿದ್ದರೂ ಇಲಾಖೆಯ ಅಧಿಕಾರಿಗಳು ಅದರ ಗೋಜಿಗೆ ಹೋಗದಿರುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಸ್ನಾನಕ್ಕೆ ತಣ್ಣೀರೇ ಗತಿಯಾಗಿದೆ. ಚಳಿ ಮಳೆ ಎನ್ನದೆ ವಿದ್ಯಾರ್ಥಿಗಳು ತಣ್ಣೀರ ಸ್ನಾನ ಮಾಡುವುದು ಅನಿವಾರ್ಯವಾಗಿದೆ. ಸೋಲಾರ್ ವಾಟರ್ ಹೀಟರ್ ಹಾಕಿಸುವಂತೆ ಮುಖ್ಯೋಪಾಧ್ಯಾಯರು ಮನವಿ ಮಾಡಿದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ. ಇದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತುಂಬಾ ಸೂಕ್ಷ್ಮ ವಿಷಯವಾಗಿದೆ. ಸರ್ಕಾರ ಇತ್ತ ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಕಟ್ಟಡಕ್ಕೆ ಕಾಂಪೌಂಡ್ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲವಾಗಿದೆ. ಆದ್ದರಿಂದ ಕೂಡಲೆ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅಭ್ಯಾಸದ ಹಿತದೃಷ್ಟಿಯಿಂದ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂಬುದು ವಿದ್ಯಾರ್ಥಿಗಳ ಪಾಲಕರ ಒತ್ತಾಯವಾಗಿದೆ.
ಕಿಟ್ ಬಂದಿಲ್ಲ
ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ 3 ವರ್ಷಗಳಿಂದ ಹೊದಿಕೆ ಮತ್ತು ಹಾಸಿಗೆ ನೀಡಿಲ್ಲ. ಕಳೆದ ಒಂದು ವರ್ಷದಿಂದ ಪ್ರತಿನಿತ್ಯದ ಬಳಕೆ ಮಾಡುವ ಕಿಟ್‌ಗಳನ್ನು ಸರ್ಕಾರ ನೀಡಿಲ್ಲ. ಸರ್ಕಾರ ನೀಡಿದಲ್ಲಿ ಅವುಗಳನ್ನು ಕೊಡುವ ಕಾರ್ಯ ಮಾಡಲಾಗುವುದು ಎಂದು ಗದಗ ಜಿಲ್ಲಾ ವಸತಿ ಶಾಲೆಗಳ ಶಿಕ್ಷಣ ಸಂಘದ ಜಿಲ್ಲಾಧಿಕಾರಿ ರವಿ ಗುಂಜೀಕರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.