ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ನಡೆಯುತ್ತಿರುವ ವಿದ್ಯಾರ್ಥಿ ವಿರೋಧಿ ಧೋರಣೆ ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನು ಪ್ರತಿಭಟನಾನಿರತ ವಿದ್ಯಾರ್ಥಿಗಳು ಖಂಡಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದ ವಿಸಿಗೆ ಧಿಕ್ಕಾರ ಕೂಗಿ, ಕಚೇರಿಯ ಬೋರ್ಡ್‌ಗೆ ಕಪ್ಪು ಮಸಿ ಬಳಿದರು. ಕುಲಪತಿಗಳ ಕಚೇರಿಯನ್ನು ವಿದ್ಯಾರ್ಥಿಗಳು ಅಕ್ಷರಶಃ ಧ್ವಂಸಗೊಳಿಸಿದರು.
ಕಳೆದ ಐದು ತಿಂಗಳ ಹಿಂದೆ ನಡೆದ 1-3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿಲ್ಲ. ಕಳೆದ ಮೂರು ವರ್ಷಗಳಿಂದ ಪದವಿ ಅಂಕಪಟ್ಟಿಗಳನ್ನು ವಿತರಿಸದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.ವಿಶ್ವವಿದ್ಯಾಲಯವು ಏಕಾಏಕಿ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಸಾವಿರಾರು ರೂಪಾಯಿ ಗಳಷ್ಟು ಹೆಚ್ಚಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮರಣ ಶಾಸನವಾಗಿದೆ. ಡಿಜಿಟಲ್ ಮೌಲ್ಯಮಾಪನದಲ್ಲಿನ ತಾಂತ್ರಿಕ ಲೋಪಗಳಿಂದಾಗಿ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರು ಫೇಲ್ ಎಂದು ತೋರಿಸುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕುವೆಂಪು ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಕುವೆಂಪು ವಿವಿಯ ಕುಲಸಚಿವರು ಆಗಿರುವ ಶಿವಮೊಗ್ಗ ಜಿ.ಪಂ ಸಿಇಒ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್ ಹಾಗೂ ಹೆಚ್ಚುವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಪ್ಪ ಭೇಟಿ ನೀಡಿದರು.
ಪ್ರತಿಭಟನಾಕಾರರ ಜತೆ ಮಾತನಾಡಿದ ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳೇನು?
*ಏಕಾ ಏಕಿ ಏರಿಸಿರುವ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ ಹಾಗು ಪ್ರವೇಶ ಶುಲ್ಕವನ್ನು ಇಳಿಸಬೇಕು.
*ಭ್ರಷ್ಟಾಚಾರದ ಆರೋಪ ಹಾಗು ವಿಶ್ವ ವಿದ್ಯಾಲಯದಲ್ಲಿ ಕಳಂಕ ಹೊತ್ತಿರುವ ಎಲ್ಲಾ ಅಧಿಕಾರಿಗಳನ್ನೂ ತಕ್ಷಣ ವಜಾ ಮಾಡಬೇಕು.
*2021-22ರ ದೂರಶಿಕ್ಷಣ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಅಂಕಪಟ್ಟಿ, ಫಲಿತಾಂಶದ ಬಗ್ಗೆ ಕೂಡಲೆ ಗಮನಹರಿಸಬೇಕು
ಕಿಡಿಗೇಡಿಗಳ ಕೃತ್ಯ: ಪ್ರಕರಣ ದಾಖಲಿಸುತ್ತೇವೆ:ಎನ್‌ಎಸ್‌ಯುಐ ನೇತೃತ್ವದಲ್ಲಿ ಕುವೆಂಪು ವಿವಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪೀಠೋಪಕರಣ ಧ್ವಂಸಗೊಳಿಸಿರುವುದು ಕಿಡಿಗೇಡಿಗಳ ಕೃತ್ಯ. ಇವರು ಯಾರು ವಿದ್ಯಾರ್ಥಿಗಳಲ್ಲ, ಅಂತಹವರ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಪ್ರತಿಭಟನೆ ವೇಳೆ ನಡೆದ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಎಂಬಿಎ ವಿಭಾಗದ ಮಾರಾಟ ಮಳಿಗೆ ಪ್ರಾರಂಭ ಮಾಡಿದ್ದೇವು.ಈ ಸಮಯದಲ್ಲಿ ಕಚೇರಿಯಿಂದ ಕಾಲ್ ಬಂತು. ಯಾರೋ ಕಿಡಿಗೇಡಿಗಳು ನುಗ್ಗಿ ಪಾಟ್ ಒಡೆದಿದ್ದಾರೆ ಎಂದು ಹೇಳಿದರು.ವಿವಿಯಿಂದ ಹಿಂದೆ ಹೊರಹೋದ ಅಧಿಕಾರಿಗಳೇ ಕೃತ್ಯದ ಹಿಂದಿದ್ದಾರೆ. ಕುವೆಂಪು ವಿವಿಯ ವಿರುದ್ಧ ಸುಳ್ಳು ಆಪಾದನೆ ಮಾಡುವ ಕೆಲಸ ಆಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದರು.