2020ರ ಆನಂತರ ಮುದ್ರಿತ ಅಂಕಪಟ್ಟಿ ನೀಡಿಲ್ಲ-ಗ್ಯಾನೇಶ ಕಡಗದ
ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸುವಂತೆ ಒತ್ತಾಯಿಸಿ ಎಸ್‌ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಮಿತಿ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ರಾಜ್ಯದಲ್ಲಿ ಎನ್‌ಇಪಿ 2020 ಜಾರಿಯಾದ ಆನಂತರ 22ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು 51 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ ಎಸ್ಇಪಿ ಜಾರಿಗೊಳಿಸಿದೆ. ಆದರೆ ಎನ್‌ಇಪಿ ವಿದ್ಯಾರ್ಥಿಗಳಿಗೂ ಅಂಕಪಟ್ಟಿ ಸಿಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆ ಅಂಕಪಟ್ಟಿ ಬೇಕಾಗಿರುವ ಕಾರಣ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಸಹ ತೊಂದರೆ ಉಂಟಾಗಿದೆ ಎಂದು ದೂರಿದರು.ಎನ್ಇಪಿಯಲ್ಲಿ ಆನ್‌ಲೈನ್ ಅಂಕಪಟ್ಟಿ ಜತೆಗೆ ಮುದ್ರಿತ ಅಂಕಪಟ್ಟಿ ನೀಡಬೇಕು ಎಂದು ಆದೇಶ ಇದೆ. ಅದಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು 2022 ಡಿ. 22ರಂದು ಎಲ್ಲ ವಿಶ್ವವಿದ್ಯಾನಿಲಯಗಳು ಮುದ್ರಿತ ಅಂಕಪಟ್ಟಿ ವಿತರಿಸಬೇಕು ಎಂದು ಆದೇಶ ನೀಡಿದ್ದರೂ ವಿಶ್ವವಿದ್ಯಾನಿಲಯಗಳು ಪಾಲಿಸುತ್ತಿಲ್ಲ. ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಂಕಪಟ್ಟಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಅಮರೇಶ್ ಕಡಗದ, ತಾಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಸಮೀರ, ಮೌನೇಶ್, ದರ್ಶನ, ಪ್ರಶಾಂತ್, ಆಶಾ, ಪವಿತ್ರಾ, ಹುಲಿಗೆಮ್ಮ, ಉಮಾ, ಅಕ್ಷತಾ, ಸಂಗೀತಾ, ಸುರೇಶ, ಪ್ರಶಾಂತಿ, ಮಹೇಂದ್ರ ಇತರರು ಇದ್ದರು.