ಶಿರಹಟ್ಟಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಾಲಾ- ಕಾಲೇಜು ವೇಳೆ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಬಸ್ ಬಿಡುವಂತೆ ಆಗ್ರಹಿಸಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಹಟ್ಟಿ ತಾಲೂಕು ಘಟಕದ ವತಿಯಿಂದ ಬಸ್ ತಡೆದು ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ಛಬ್ಬಿ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಸೇರಿ ಸುಮಾರು ೩ ತಾಸು ಬಸ್ ತಡೆದು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಈ ವೇಳೆ ಸಂಘಟನೆಯ ನಗರ ಘಟಕದ ಕಾರ್ಯದರ್ಶಿ ಪರಶುರಾಮ ಕಳ್ಳಿಮನಿ ಮಾತನಾಡಿ, ಪ್ರತಿ ನಿತ್ಯವೂ ಶಾಲಾ ಕಾಲೇಜಿಗೆ ತೆರಳುವ ಸಮಯಕ್ಕೆ ಬಸ್‌ಗಳು ಬರುವುದಿಲ್ಲ. ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ತೆರಳಲು ಇದರಿಂದ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.ಶಾಲಾ- ಕಾಲೇಜುಗಳು ಪ್ರಾರಂಭವಾದಾಗಿನಿಂದಲೂ ಪ್ರತಿವರ್ಷವೂ ಇದೇ ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಓದಿಗೂ ಹಿನ್ನಡೆಯಾಗುತ್ತಿದೆ. ಅನೇಕ ಬಾರಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದು, ವಿದ್ಯಾರ್ಥಿಗಳ ಗೋಳು ಆಲಿಸದ ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತಿದ್ದಾರೆ ಎಂದು ಆರೋಪಿಸಿದರು.ಇದೇ ಮೊದಲಲ್ಲ: ಈ ಹಿಂದೆಯೂ ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ೩ಕ್ಕೂ ಹೆಚ್ಚು ಬಾರಿ ಪ್ರತಿಭಟನೆ ನಡೆಸಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಇದುವರೆಗೂ ಸಮಯಕ್ಕೆ ಸರಿಯಾಗಿ ಬಸ್ ಬಾರದಿರುವುದಕ್ಕೆ ಈ ಬಾರಿ ಮತ್ತೆ ಗ್ರಾಮೀಣ ಭಾಗದಿಂದಲೇ ಪ್ರತಿಭಟನೆ ನಡೆಸಲಾಯಿತು ಎಂದರು.ವಿದ್ಯಾರ್ಥಿಗಳು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದ ಕೆಲಹೊತ್ತಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈಗಾಗಲೆ ಪದವಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ತರಗತಿಗಳು ಪ್ರಾರಂಭವಾಗಿವೆ. ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದು, ನಿತ್ಯ ಬಸ್ ತೊಂದರೆಯಿಂದಾಗಿ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸೋಮಶೇಖರ್, ಕಾವ್ಯ ಮಠಪತಿ, ರೂಪ ಆಡ್ರಕಟ್ಟಿ, ವಿಜಯಲಕ್ಷ್ಮಿ, ರಾಘವೇಂದ್ರ, ವಿನಯ, ನಿಂಗರಾಜ್, ಹನುಮಂತ ಮುಂತಾದವರು ಇದ್ದರು. ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.