ವಿದ್ಯಾರ್ಥಿಗಳೇ ಮಹಾನ್ ವ್ಯಕ್ತಿಗಳ ಚರಿತ್ರೆಗಳನ್ನು ಓದಿ: ಹಳ್ಳಿಕೆರೆ ಸತೀಶ್

KannadaprabhaNewsNetwork | Published : May 13, 2025 11:46 PM
Follow Us

ಸಾರಾಂಶ

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಬೋಧನೆಗಳನ್ನು ಅನುಸರಿಸುವ ಮೂಲಕ ಜಾತಿ, ಧರ್ಮ ಮತ್ತು ಇತರ ಸಾಂಸ್ಕೃತಿಕ ಗುರುತುಗಳನ್ನು ಆಧರಿಸಿದ ಸಾಮಾಜಿಕ ತಾರತಮ್ಯ ಎದುರಿಸಿ ಸಮಾನತೆ ಮತ್ತು ಸಾಮರಸ್ಯವನ್ನು ಸ್ಥಾಪಿಸಬಹುದು. ಇವರಗಳ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಜತೆಗೆ ಮಹಾನ್ ವ್ಯಕ್ತಿಗಳ ಚರಿತ್ರೆಗಳನ್ನು ಓದಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದು ರಾಣಿ ಐಶ್ವರ್ಯ ಡೆವಲಪರ್ಸ್ ಮತ್ತು ಬಿಲ್ಡ್‌ರ್ಸ್ ಮಾಲೀಕ ಹಳ್ಳಿಕೆರೆ ಸತೀಶ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾರತ ಸಂವಿಧಾನ ರಕ್ಷಣಾ ವೇದಿಕೆ ಮತ್ತು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಆಯೋಜಿಸಿದ್ದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಜನ್ಮ ದಿನಾಚರಣೆ, ಎಸ್ಸೆಸ್ಸೆಲ್ಸಿ ಅತ್ತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಬೋಧನೆಗಳನ್ನು ಅನುಸರಿಸುವ ಮೂಲಕ ಜಾತಿ, ಧರ್ಮ ಮತ್ತು ಇತರ ಸಾಂಸ್ಕೃತಿಕ ಗುರುತುಗಳನ್ನು ಆಧರಿಸಿದ ಸಾಮಾಜಿಕ ತಾರತಮ್ಯ ಎದುರಿಸಿ ಸಮಾನತೆ ಮತ್ತು ಸಾಮರಸ್ಯವನ್ನು ಸ್ಥಾಪಿಸಬಹುದು. ಇವರಗಳ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯಬೇಕು ಎಂದರು.

ತಾಲೂಕಿನಲ್ಲಿ ಅಂತರ್‌ ಜಾತಿ ವಿವಾಹಯಾಗುವವರಿಗೆ ತಾವು ವೈಯಕ್ತಿಕ 25 ಸಾವಿರ ರು. ಗಳ ಪ್ರೋತ್ಸಾಹ ಧನವನ್ನು ವಿತರಿಸುವ ಭರವಸೆ ನೀಡಿದರು. ಬುದ್ದೀಸ್ಟ್ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಮಾತನಾಡಿದರು.

ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಎಂ.ವಿನಿಯ್‌ಕುಮಾರ್ ವಿಶೇಷ ಉಪನ್ಯಾಸ ನೀಡಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತಾಲೂಕಿನ ಸಿ.ಪುನೀತಾ, ಮೋನಿಕಾ, ಪ್ರಥಮ್, ಪುಣ್ಯಶ್ರೀ, ಭೂಮಿಕಾ, ವರ್ಷಿಣಿ, ಅರಬಿನ್, ವೈಷ್ಣವಿ, ಸಿ.ಪುಣ್ಯಶ್ರೀ, ಎಂ.ವಿ.ತನಶ್ರೀ ಅವರಿಗೆ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪುರಸಭೆಯ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಿವಿಧ ಸಂಘಟನೆಯ ಪದಾಧಿಕಾರಿಗಳು, ಗಣ್ಯರು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಸಾಂಸ್ಕೃತಿಕ ಕಲಾ ತಂಡಗಳೊಟ್ಟಿಗೆ ಮೆರವಣಿಗೆ ಕೈಗೊಂಡು ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಯಿತು.

ಈ ವೇಳೆ ಜಿ.ಪಂ. ಮಾಜಿ ಸದಸ್ಯ ಬೋರಯ್ಯ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯೆ ಪ್ರಮೀಳ, ಬಿಇಒ ಧನಂಜಯ, ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಯೋಗಾನಂದ, ಭಾರತ ಸಂವಿಧಾನದ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಕೆ.ಟಿ.ಶಿವಕುಮಾರ್, ಪಿ.ಶಶಿಕುಮಾರ್, ದಾಕ್ಷಾಯಿಣಿ, ರಾಚಯ್ಯ, ರಶ್ಮಿಪುಟ್ಟಲಿಂಗಯ್ಯ ಇದ್ದರು.