ನರಗುಂದ: ದೇಶದ ಆಡಳಿತ ವ್ಯವಸ್ಥೆ ಮಕ್ಕಳಿಗೆ ತಿಳಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿ ಪರಿಚಯಿಸಬೇಕು. ಶಿಕ್ಷಕರು ಶಾಲಾ ಹಂತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೋಧಿಸಲು ಮುಂದಾಗಬೇಕೆಂದು ಲಯನ್ಸ್ ಶಿಕ್ಷಣ ಸಂಸ್ಥೆ ಚೇರಮನ್, ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಮಾತನಾಡಿ, ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಅಪಾಯಕಾರಿಯಾಗಿದೆ. ಆದ್ದರಿಂದ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡಬೇಕಿದೆ. ಜಗತ್ತು ವಿಸ್ತಾರವಾಗಿ ಬೆಳೆಯುತ್ತಿದೆ. ಜಗತ್ತನ್ನು ಬದಲಾಯಿಸಲುವ ಶ್ರೇಷ್ಠ ಸಮರ್ಥ ಆಯುಧ ಶಿಕ್ಷಣವಾಗಿದೆ. ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಕಷ್ಟ ಪಟ್ಟು ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮೀಸಲಾಗಿರದೇ ಸಾಂಸ್ಕೃತಿಕ, ಕ್ರೀಡೆ ಹಾಗೂ ವಿಜ್ಞಾನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಇದರಿಂದ ಮಾತ್ರ ದೈಹಿಕ, ಮಾನಸಿಕ ಸಬಲರಾಗಿ ಸರ್ವತೋಮುಖ ವ್ಯಕ್ತಿತ್ವ ಹೊಂದಲು ಸಾಧ್ಯ. ಪ್ರತಿಯೊಬ್ಬರು ಶಿಸ್ತು, ಸಹನೆ, ಶಾಂತಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಅದನ್ನು ಪ್ರೋತ್ಸಾಹಿಸುವ ಕೆಲಸ ಶಿಕ್ಷಕರಿಂದ ನಡೆಯಬೇಕು ಎಂದರು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಬೇಕು. ವ್ಯಸನಮುಕ್ತರಾಗಿ ತಂದೆ, ತಾಯಿ ಹಾಗೂ ಗುರುಗಳನ್ನು ಗೌರವಿಸಬೇಕು. ನೆಮ್ಮದಿಯಿಂದ ಜೀವನ ನಡೆಸಲು ದೇವರನ್ನು ನಂಬಬೇಕು. ಸಮಯಪ್ರಜ್ಞೆ ಹಾಗೂ ಕರ್ತವ್ಯಪ್ರಜ್ಞೆ ಎಲ್ಲರಲ್ಲೂ ಬರಬೇಕು ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾಗಿ ಪ್ರಿತಂ ಪಟ್ಟಣಶೆಟ್ಟಿ, ಕ್ರೀಡಾ ಮಂತ್ರಿಗಳಾಗಿ ಪವನ ಅರ್ಕಸಾಲಿ, ಸಾಂಸ್ಕೃತಿಕ ಮಂತ್ರಿಗಳಾಗಿ ಈಶ್ವರಪ್ಪ ಹೂಗಾರ, ಶಿಸ್ತುಮಂತ್ರಿಗಳಾಗಿ ತೇಜಶ್ವಿನಿ ಕೋಟಿ, ಶಿಕ್ಷಣ ಮಂತ್ರಿಗಳಾಗಿ ಮಣಿಕಂಠ ಆನೇಗುಂದಿ, ಆರೋಗ್ಯ ಮಂತ್ರಿಗಳಾಗಿ ಗೋವಿಂದಸಿಂಗ್ ರಾಥೋಡ, ಪ್ರವಾಸ ಮಂತ್ರಿಗಳಾಗಿ ಸುಜೀತ ರಾಮದುರ್ಗ, ಹಣಕಾಸು ಮಂತ್ರಿಗಳಾಗಿ ಸುಜಯ ಕುಲಕರ್ಣಿ ಪ್ರಮಾಣ ವಚನ ಸ್ವೀಕರಿಸಿದರು.
ನಿರ್ದೇಶಕ ಜಿ.ಬಿ. ಕುಲಕರ್ಣಿ ನೂತನ ಸಂಸತ್ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ತನುಜಾ ಪಾಟೀಲ ವಿವಿಧ ಸಮಿತಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಲಾ ಸಂಸತ ಸದಸ್ಯರಿಗೆ ಶಾಸಕರು ಬ್ಯಾಚ್ ತೊಡಿಸಿ ಗೌರವಿಸಿದರು. ವೇದಿಕೆಯಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಜಿ.ಬಿ.ಕುಲಕರ್ಣಿ, ಸಿ.ಎಸ್.ಸಾಲೂಟಗಿಮಠ, ವಿಜಯಕುಮಾರ ಬೇಲೇರಿ, ಕೋ ಆರ್ಡಿನೇಟರ್ ಪ್ರೇರಣಾ ಪಾತ್ರಾ ಇದ್ದರು. ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ಸ್ವಾಗತಿಸಿದರು. ಸೌಜನ್ಯ ನೇಸರಗಿ ಕಾರ್ಯಕ್ರಮ ನಿರೂಪಿಸಿದರು. ತನುಜಾ ಕವಲೂರು ವಂದಿಸಿದರು.