ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು: ನ್ಯಾ. ದಾಸರಿ ಕ್ರಾಂತಿ ಕಿರಣ್ ಕರೆ

KannadaprabhaNewsNetwork | Published : May 16, 2024 12:53 AM

ಸಾರಾಂಶ

ನರಸಿಂಹರಾಜಪುರ, ಸೇವೆ ಎಂಬುದು ಯಾವುದೇ ಸಂಭಾವನೆ ಪಡೆಯದೆ ನಿರ್ವಹಿಸುವ ಕಾರ್ಯ. ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿಯೇ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಕರೆ ನೀಡಿದರು. ಮಂಗಳವಾರ ಸಂಜೆ ತಾಲೂಕಿನ ಹೊನ್ನೆಕೂಡಿಗೆ ಗ್ರಾಮದಲ್ಲಿ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹೊನ್ನೇಕೊಡಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್ಎಸ್ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸೇವೆ ಎಂಬುದು ಯಾವುದೇ ಸಂಭಾವನೆ ಪಡೆಯದೆ ನಿರ್ವಹಿಸುವ ಕಾರ್ಯ. ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿಯೇ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಕರೆ ನೀಡಿದರು. ಮಂಗಳವಾರ ಸಂಜೆ ತಾಲೂಕಿನ ಹೊನ್ನೆಕೂಡಿಗೆ ಗ್ರಾಮದಲ್ಲಿ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಾಲ್ಕುಗೋಡೆಗಳ ಮಧ್ಯೆ ಕಲಿಯುವ ಶಿಕ್ಷಣದ ಜತೆಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಸೇವಾ ಮನೋಭಾವ ಮುಖ್ಯವಾಗಿದೆ. ರಾಷ್ಟ್ರೀಯ ಸೇವಾ ಯೋಜನೆ ಶಿಬಿರವೂ ಸೇರಿದಂತೆ ಯಾವುದೇ ಶಿಬಿರಗಳು ವ್ಯಕ್ತಿತ್ವ ವಿಕಸಗೊಳಿಸಲು ಪೂರಕ.ಯುವ ಜನಾಂಗದಲ್ಲಿ ಕೌಶಲ್ಯಗಳನ್ನು ಬೆಳೆಸಲು ಸಹಾಯಕವಾಗುತ್ತವೆ. ಸರ್ಕಾರಿ ಕಾಲೇಜುಗಳಲ್ಲಿ ಬಹುತೇಕವಾಗಿ ಸೇವಾ ಶಿಬಿರ ಆಯೋಜಿಸಲಾಗುತ್ತದೆ. ಇದರ ಉದ್ದೇಶ ಮಕ್ಕಳಲ್ಲಿ ಸಾಮಾಜಿಕ ಜವಾಬ್ಧಾರಿ ಬೆಳೆಸುವುದಾಗಿದೆ ಎಂದರು.

ಅತಿಥಿಯಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮತಿ ಕಾರ್ಯಾಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ಬೆಳೆಯಲು ಕ್ರೀಡೆ, ಸಾಂಸ್ಕೃತಿ ಚಟುವಟಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಪೂರಕ. ಶಿಬಿರಾರ್ಥಿಗಳು ಮೇಲು, ಕೀಳು ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಶಿಬಿರದ ವಿವಿಧ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಬದುಕಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮನುಷತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಎನ್ ಸಿಸಿ ಮತ್ತು ಎನ್ ಎಸ್ ಎಸ್ ಶಿಬಿರಗಳು ಸಹಾಯಕವಾಗುತ್ತವೆ. ಶಿಬಿರದಲ್ಲಿ ವಿದ್ಯಾರ್ಥಿಗಳ ಭಾಷಾ ಜ್ಞಾನ, ಆರೋಗ್ಯದ ವೃದ್ಧಿಗೆ ಸಹಾಯಕವಾಗುವಂತಹ ಉಪನ್ಯಾಸ ಏರ್ಪಡಿಸಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮ ಅಧಿಕಾರಿ ರುಖಿಯತ್ ಮಾತನಾಡಿ, ಗ್ರಾಮೀಣ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂಬ ಗಾಂಧೀಜಿಯವರ ಚಿಂತನೆಯಂತೆ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ದೇಶ ಪ್ರೇಮ ಬೆಳೆಸುವುದು, ಗ್ರಾಮೀಣ ಜನರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಜೀವನದ ಪರಿಚಯ ಮಾಡುವುದು ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶ ಎಂದರು.

ಕಾಲೇಜು ಪ್ರಾಂಶುಪಾಲ ಧನಂಜಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಹನೆ, ತ್ಯಾಗ, ಸಾಮಾಜಿಕ ಅರಿವು, ಸೇವಾ ಮನೋಭಾವನೆ ಬೆಳೆಸಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವುದು ಶಿಬಿರದ ಉದ್ದೇಶ. ದೇಶದ 450 ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ 2 ಕೋಟಿ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಕೊಂಡಿದ್ದು ಅವರಲ್ಲಿ ಸಾಮಾಜಿಕ ಜವಾಬ್ಧಾರಿ ಬೆಳೆಸುವ ಕಾರ್ಯಮಾಡಲಾಗುತ್ತಿದೆ ಎಂದರು.

ಸೋಷಿಯಲ್ ವೆಲ್ ಫೇರ್ ಸೊಸೈಟಿ ನಿರ್ದೇಶಕ ಫಾದರ್ ಜೋವಿಷ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದೇವಂತ್, ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ವೀಣಾ, ಸದಸ್ಯೆ ಕೆ.ಸರಸ್ಪತಿ,ಕೆ.ಎನ್.ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮತಿ, ಮುಖ್ಯಶಿಕ್ಷಕ ರಾಜಪ್ಪ, ವಕೀಲರ ಸಂಘದ ಕಾರ್ಯದರ್ಶಿ ದೇವೇಂದ್ರ, ವಕೀಲ ಪೌಲ್ ಚೆರಿಯನ್.ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಎಂ.ಎಚ್.ವಿಶ್ವನಾಥ್ ಇದ್ದರು.

Share this article