ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸುವ ಯಾವ ಕಾಳಜಿಗಳು ಈ ಎರಡು ಸರ್ಕಾರಗಳಿಗಿಲ್ಲ.
ಬಳ್ಳಾರಿ: ನಗರದ ಗಾಂಧಿಭವನದಲ್ಲಿ ಎಸ್‌ಎಫ್‌ಐ ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಯಿತು.
ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಡಾ.ದೊಡ್ಡ ಬಸವರಾಜ್ ಗುಳೇದಾಳ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿವೆ. ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸುವ ಯಾವ ಕಾಳಜಿಗಳು ಈ ಎರಡು ಸರ್ಕಾರಗಳಿಗಿಲ್ಲ. ಶಿಕ್ಷಕರು, ಉಪನ್ಯಾಸಕ ಕೊರತೆ ನೀಗಿಸುತ್ತಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳು ಜೀವಂತವಾಗಿವೆ. ಪ್ರತಿವರ್ಷ ಶೈಕ್ಷಣಿಕ ಶುಲ್ಕವನ್ನು ಹೆಚ್ಚಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡಿವೆ ಎಂದು ದೂರಿದರಲ್ಲದೆ, ಆಡಳಿತ ಸರ್ಕಾರಗಳ ಶಿಕ್ಷಣ ವಿರೋಧಿ ಧೋರಣೆಯನ್ನು ಖಂಡಿಸಿ, ಹೋರಾಟಗಳನ್ನು ರೂಪಿಸಬೇಕು. ಜನಪರ ಚಳುವಳಿಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಲೇಖಕ ಪಿ.ಆರ್. ವೆಂಕಟೇಶ್ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಸಮಾಜಮುಖಿ ಕಾಳಜಿಯ ವಿದ್ಯಾರ್ಥಿ ಸಂಘಟನೆಯಾಗಿದೆ. ದೇಶದ ಅತಿದೊಡ್ಡ ಸಂಘಟನೆಯಾಗಿದೆ. ಪ್ರಜಾಪ್ರಭುತ್ವ ಹಾಗೂ ಶಿಕ್ಷಣದ ಉಳಿವಿಗಾಗಿ ಹೋರಾಡುವ ಈ ಸಂಘಟನೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಹೋರಾಟದ ಜೊತೆಗೆ ನಿತ್ಯದ ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಓದಿನಲ್ಲಿ ಎಲ್ಲರಿಗಿಂತಲೂ ಸಂಘಟನೆಯ ಸದಸ್ಯರು ಮುಂದಿರಬೇಕು ಎಂದು ತಿಳಿಸಿದರು.
ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷ ಜಯಸೂರ್ಯ ಪ್ರಾಸ್ತಾವಿಕ ಮಾತನಾಡಿದರು. ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಎಸ್ಎಫ್ಐ ತಾಲೂಕು ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಎಂ.ರಾಜೇಂದ್ರ ಪ್ರಸಾದ್, ಕಾರ್ಯದರ್ಶಿಯಾಗಿ ವರದರಾಜ್, ಉಪಾಧ್ಯಕ್ಷರಾಗಿ ಅಶೋಕ್, ನಂದಿನಿ, ಶಿರೀಷಾ, ಶಿವಕುಮಾರ್, ಕಾರ್ಯದರ್ಶಿಯಾಗಿ ಫಾತಿಮಾ ಬೇಗಂ, ಕಾವ್ಯ, ಕಾವೇರಿ, ಅಜಯ್ ಸೇರಿ 20 ಜನರ ಸಮಿತಿಗೆ ಆಯ್ಕೆಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.