ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚು ಮಹತ್ವ ನೀಡಿ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork | Published : Feb 6, 2024 1:33 AM

ಸಾರಾಂಶ

ಪಟ್ಟಣದ ಕೆಎಲ್‌ಕೆ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಹೆಚ್ಚಿನ ಪೈಪೋಟಿಯಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.

- ಕೆ.ಎಲ್.ಕೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕ್ರೀಡಾ-ಸಾಂಸ್ಕೃತಿಕ ಸಮಾರೋಪ। ವಿದ್ಯಾರ್ಥಿಗಳಿಗೆ ಪಿಯುಸಿ ಟರ್ನಿಂಗ್ ಪಾಯಿಂಟ್ಕನ್ನಡಪ್ರಭ ವಾರ್ತೆ, ಬೀರೂರು

ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಹೆಚ್ಚಿನ ಪೈಪೋಟಿಯಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಕೆಎಲ್‌ಕೆ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಷಯದ ಆಳವಾದ ಅರಿವಿನ ಮೂಲಕ ಕಲಿತ ವಿದ್ಯೆಗೆ ಹೆಚ್ಚಿನ ಮಹತ್ವವಿದ್ದು ವರ್ಷವಿಡಿ ಕಲಿತದ್ದನ್ನು ಪರೀಕ್ಷೆ ಮೂಲಕ ವ್ಯಕ್ತಪಡಿಸಲು ಏಕಾಗ್ರತೆ ಮುಖ್ಯ. ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ಕಠಿಣ ಮತ್ತು ಏಕಾಗ್ರತೆ ಅಭ್ಯಾಸ ಪ್ರಮುಖವಾಗಲಿ ಎಂದರು.ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಉತ್ತಮ ಅಂಕಗಳಿಸಿ ಸಾಧನೆ ಹಿಂದೆ ಪರಿಶ್ರಮ ಅಡಗಿದೆ ಎಂಬುದನ್ನು ಅರಿತಾಗ ಸಾಧನೆ ಸುಲಭ ಸಾಧ್ಯ, ಕಲಿಕೆಯ ಉತ್ಸಾಹ, ಕ್ರಿಯಾ ಶೀಲತೆ, ಏಕಾಗ್ರತೆ ಮತ್ತು ತಾಳ್ಮೆ ಗುಣವನ್ನು ಶೈಕ್ಷಣಿಕ ಬದುಕಿನಲ್ಲಿ ಅಳವಡಿಸಿಕೊಂಡು ನಕಾರಾತ್ಮಕ ಚಿಂತನೆ ಬದಿಗಿಟ್ಟು ಸಕಾರಾತ್ಮಕ ಚಿಂತನೆ ಮೂಲಕ ಅದೃಷ್ಟದ ಬದುಕಿಗೆ ಚಿಂತಿಸದೇ ಸಾಧಕನ ಬದುಕಿಗೆ ಮುನ್ನುಡಿ ಬರೆದುಕೊಳ್ಳಿ ಎಂದು ಸಲಹೆ ಮಾಡಿದರು.

ವಿದ್ಯಾರ್ಥಿಗಳ ಬದುಕಿಗೆ ತಿರುವು ನೀಡುವ ದ್ವಿತೀಯ ಪಿಯುಸಿ ಮುಗಿದ ಮೇಲೆ ಜೀವನಕ್ಕೆ ಸ್ಪಷ್ಟ ದಾರಿ ಮತ್ತು ಗುರಿ ನಿರ್ಧಾರವಾಗುತ್ತದೆ. ತಾವು ಓದುವ ಯಾವುದೇ ವಿಷಯದಲ್ಲಿ ಕೀಳರಿಮೆ ಬೇಡ, ಇಡೀ ದೇಶದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಿರುವುದು ಕಲಾವಿಭಾಗದಲ್ಲೇ ಅದು ನೆನಪಿರಲಿ ಎಂದರು.

ಕೆ.ಎಲ್.ಕೆ. ಕಾಲೇಜಿಗೆ ತನ್ನದೇ ವಿಶೇಷ ಇತಿಹಾಸವಿದೆ ಅಂತಹ ಕಾಲೇಜಿಗೆ ಬೇಕಾಗಿರುವ ಕಾಂಪೌಂಡ್, ಉಪನ್ಯಾಸಕರ ಕೊರತೆ ಮತ್ತಿತರ ಅವಶ್ಯಕವಾದುದನ್ನು ಮಾಡಿಸಿಕೊಡುವ ಭರವಸೆ ನೀಡಿದರು.

ಕಾಲೇಜು ಸಮಿತಿ ಉಪಾಧ್ಯಕ್ಷ ಕೀರ್ತಿ ಗಾರ್ಮೆಂಟ್ಸ್ ಯತೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಸಮಯ ಅತ್ಯಂತ ಮಹತ್ವವಾಗಿದ್ದು ಶಿಕ್ಷಣ ಸಮಯವನ್ನು ವ್ಯರ್ಥ ಮಾಡದೇ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸಂಸ್ಕಾರವಂತರಾಗಬೇಕು. ದೇಶದ ಭವಿಷ್ಯದ ಪ್ರಜೆಗಳಾದ ಯುವಶಕ್ತಿ ದೇಶದ ಬಗ್ಗೆ ಅಭಿಮಾನ ಬೆಳೆಸಿ ಕೊಳ್ಳಬೇಕು ಎಂದರು.

ಪುರಸಭಾ ಸದಸ್ಯ ಬಿ.ಕೆ.ಶಶಿಧರ್ ಮಾತನಾಡಿ, ಪ್ರತಿಭೆ ಅನಾವರಣಕ್ಕೆ ಕ್ರೀಡಾ ಸಾಂಸ್ಕೃತಿಕ ಸಂಘ ವೇದಿಕೆಯಾಗಿದೆ. ಮಕ್ಕಳು ಹಗಲು ಕನಸು ಕಾಣದೇ ಸಾಧನೆ ಹಂಬಲದ ಕನಸಿಗೆ ಮಹತ್ವ ನೀಡಬೇಕೆಂದರು. ಶಿಕ್ಷಣವನ್ನು ಸರ್ಟಿಫಿಕೇಟ್ ಪಡೆಯುವ ಸಾಧನ ಮಾತ್ರವಾಗಿರಿಸಿಕೊಳ್ಳದೇ ಸಾಮಾಜಿಕ ಸಮಸ್ಯೆ ಗಳಿಗೆ ಸ್ಪಂಧಿಸುವ ಗುಣ ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಎಂದರು.

ಕಾಲೇಜು ಪ್ರಾಚಾರ್ಯ ಗುರುಮೂರ್ತಿ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಮುಕುಂದ, ರಾಜಪ್ಪ ದಾನಿ ಜಯಣ್ಣ, ಉಪನ್ಯಾಸಕರಾದ ಜಿ.ವಿ.ಭಾಗ್ಯಮ್ಮ, ಕೃಷ್ಣಸ್ವಾಮಿ, ಯೋಗರಾಜ್, ಬಿ.ವಿ.ಪ್ರದೀಪ್, ಮಂಜುನಾಥ್, ಮಧು ಕುಮಾರ್, ಸತೀಶ್ ಕುಮಾರ್, ವೇದಾವತಿ, ಸಂದೀಪ್, ನಂದಿನಿ, ದೀಪಾ, ಶೃತಿ, ತಿಪ್ಪೇಶ್ ಇದ್ದರು.5 ಬೀರೂರು1

ಬೀರೂರು ಕೆಎಲ್‌ಕೆ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ಎಸ್.ಆನಂದ್ ರನ್ನು ಗೌರವಿಸಲಾಯಿತು.

5 ಬೀರೂರು2

ಬೀರೂರು ಕೆಎಲ್‌ಕೆ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕ ಆನಂದ್ ಬಹುಮಾನ ವಿತರಿಸಿದರು.

Share this article