ವಿದ್ಯಾರ್ಥಿಗಳು ಭಾಷೆ, ಸಾಹಿತ್ಯವನ್ನು ಆಸಕ್ತಿಯಿಂದ ಕಲಿಯಬೇಕು: ಖಾದರ್‌

KannadaprabhaNewsNetwork |  
Published : Jan 04, 2025, 12:34 AM IST
111 | Kannada Prabha

ಸಾರಾಂಶ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಮಾತನಾಡಿ ಮಕ್ಕಳಿರುವಲ್ಲಿಗೆ ಸಾಹಿತ್ಯ ಪರಿಷತ್ತು ಹೋಗಿ ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸುತ್ತಿದೆ. ವಿದ್ಯಾರ್ಥಿಗಳೇ ಕನ್ನಡದ ಭವಿಷ್ಯ. ಅವರಲ್ಲಿ ಆಸಕ್ತಿ ಬೆಳೆಸುವ ಕಾರ್ಯವನ್ನು ಶಿಕ್ಷಕರು, ಹೆತ್ತವರು ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಾನವೀಯತೆಯನ್ನು ಅರಳಿಸುವ ಸಾಹಿತ್ಯವು ನಮಗೆ ಕಿಟಕಿಯಿದ್ದಂತೆ. ಈ ಕಿಟಕಿಯ ಮೂಲಕ ನಾವು ಜಗತ್ತನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಭಾಷೆ ಮತ್ತು ಸಾಹಿತ್ಯವನ್ನು ಆಸಕ್ತಿಯಿಂದ ಕಲಿತರೆ ಉತ್ತಮ ಪ್ರಜೆಗಳಾಗಿ ಬೆಳೆಯಬಹುದು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಉಳ್ಳಾಲ ತಾಲೂಕು ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಮಾತನಾಡಿ ಮಕ್ಕಳಿರುವಲ್ಲಿಗೆ ಸಾಹಿತ್ಯ ಪರಿಷತ್ತು ಹೋಗಿ ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸುತ್ತಿದೆ. ವಿದ್ಯಾರ್ಥಿಗಳೇ ಕನ್ನಡದ ಭವಿಷ್ಯ. ಅವರಲ್ಲಿ ಆಸಕ್ತಿ ಬೆಳೆಸುವ ಕಾರ್ಯವನ್ನು ಶಿಕ್ಷಕರು, ಹೆತ್ತವರು ಮಾಡಬೇಕು ಎಂದರು.

ಆಶಯ ಭಾಷಣ ಮಾಡಿದ ಡಾ. ಧನಂಜಯ ಕುಂಬ್ಳೆ ಮಾತನಾಡಿ ಕನ್ನಡ ಭಾಷೆ ಸುಂದರವೂ ಸುಲಲಿತವೂ ಆದ ಭಾಷೆ, ಅದರ ಸಾಹಿತ್ಯವು ಜೀವನ ಮೌಲ್ಯಗಳನ್ನು, ಸೌಹಾರ್ದತೆಯನ್ನು ಸಾರಿದೆ. ವಿದ್ಯಾರ್ಥಿಗಳು ಈ ಆದರ್ಶವನ್ನು ತಿಳಿದುಕೊಳ್ಳಬೇಕು ಎಂದರು.

ಹರೇಕಳ ಗ್ರಾಮ ಪಂಚಾಯಿತಿ ಆವರಣದಿಂದ ಜಾನಪದ ದಿಬ್ಬಣವನ್ನು ಹರೇಕಳ ಗ್ರಾಪಂ ಅಧ್ಯಕ್ಷೆ ಗುಲಾಬಿ ಉದ್ಘಾಟಿಸಿದರು. ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ, ಉಳ್ಳಾಲ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘ ದ ಅಧ್ಯಕ್ಷ ಕೆ. ಎನ್. ಆಳ್ವ, ವೀರರಾಣಿ ಅಬ್ಬಕ್ಕ ಪ್ರತಿಷ್ಠಾನದ ಅಧ್ಯಕ್ಷ ಪ್ರೊ . ಭಾಸ್ಕರ್ ರೈ ಕುಕ್ಕುವಳ್ಳಿ, ಶಾಲಾ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ, ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಸುರೇಶ್ ಅಸೈ, ಚಂದ್ರಶೇಖರ್ ಶೆಟ್ಟಿ ಮಂಟಮೆ, ಪೋಡಾರು ಜಯರಾಮ ಆಳ್ವ, ರಾಧಾಕೃಷ್ಣ ರಾವ್, ಕೃಷ್ಣಕುಮಾರ್ ಕಮ್ಮಾಜೆ, ವಿಜಯಲಕ್ಷ್ಮೀ ಕಟೀಲು ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಯಕ್ಷಗಾನ, ಸಾಂಸ್ಕೃತಿಕ ಮುಂತಾದ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಉಳ್ಳಾಲ ತಾಲೂಕಿನ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳಾದ ಸಾನ್ವಿ, ಲಾವಣ್ಯ, ವೈಷ್ಣವಿ ಶೆಟ್ಟಿ, ಏಡಿನ್ ಪ್ರಿನ್ಸನ್ ಡಿಸೋಜ,ಮಹಮ್ಮದ್ ಹಝೀಮ್, ದಿವ್ಯಶ್ರೀ ಜಿ.ಎಚ್., ದೀಕ್ಷಿತಾ, ರಿತಿಶಾ ಕೆ.ಜೆ. ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉಳ್ಳಾಲ ಕಸಾಪ ವತಿಯಿಂದ ಸಮ್ಮೇಳನದ ಸಂಚಾಲಕ ತ್ಯಾಗಂ ಹರೇಕಳ ಅವರನ್ನು ಗೌರವಿಸಲಾಯಿತು. ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ತ್ಯಾಗಂ ಹರೇಕಳ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಉಷಾಲತಾ ವಂದಿಸಿದರು.

ಸಮ್ಮೇಳನದಲ್ಲಿ ತೋನ್ಸೆ ಪುಷ್ಕಳ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿ ಕಾವ್ಯ ವಾಚನ ಗೀತ ಗಾಯನ ಗೋಷ್ಠಿ, ಡಾ.ಭಾಸ್ಕರ್ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ನಮ್ಮ ಅಬ್ಬಕ್ಕ ನಾನು ಕಂಡಂತೆ ಎಂಬ ಸಂವಾದಗೋಷ್ಠಿ, ಮಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್, ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಇವರೊಂದಿಗೆ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಮಾಧ್ಯಮ ಕುರಿತ ಸಂವಾದ ನಡೆಸಿದರು.

ಕನ್ನಡ ಶಾಲೆಗಳಿಗೆ ವಿಶೇಷ ಸೌಲಭ್ಯ ನೀಡಿ: ಫಾತಿಮತ್ ರಫೀದಸಾಹಿತ್ಯ ಸಮ್ಮೇಳನಾಧ್ಯಕ್ಷೆ, ಹರೇಕಳ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ರಫೀದ ಮಾತನಾಡಿ, ಹಿಂದೆ ಶಾಲೆಗಳ ಎಸೆಂಬ್ಲಿಯಲ್ಲಿ ವಿದ್ಯಾರ್ಥಿಗಳು ಭಾಷಣ ಮಾಡುವ, ಸುದ್ದಿ ಓದುವ, ಕವಿತಾ ವಾಚನ ಮಾಡುವ ಕ್ರಮ ಇತ್ತು ಇದು ಇಂದು ವಿರಳವಾಗುತ್ತಿದೆ. ಕನ್ನಡ ಶಾಲೆಗಳು ಕಡಿಮೆಯಾಗುತ್ತಿವೆ. ಸರ್ಕಾರ ಕನ್ನಡ ಶಾಲೆಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿ ರಕ್ಷಿಸಬೇಕು ಎಂದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?