ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು : ಪೂಜಾ ಸಜೇಶ್

KannadaprabhaNewsNetwork | Published : Mar 14, 2025 12:31 AM

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆವಿರಾಜಪೇಟೆ

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಸಮಾಜ ಸೇವಕಿ ಹಾಗೂ ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್ ಅಭಿಪ್ರಾಯಪಟ್ಟರು.

ಅವರು ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ಶಿಬಿರವು ಹೆಗ್ಗಳ ಗ್ರಾಮದಲ್ಲಿ ನಡೆದಿದ್ದು ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ವಿದ್ಯಾರ್ಥಿಗಳು ಆದರ್ಶ ಪುರುಷರ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕು. ನಮ್ಮ ಭವಿಷ್ಯ ದ ಅಭಿವೃದ್ಧಿ ನಮ್ಮಿಂದಲೇ ಆಗಿದೆ. ಪರಸ್ಪರ ಸ್ನೇಹ, ಸಹಕಾರವಿದ್ದಾಗ ಮಾತ್ರ ಸಮಾಜ ಸೇವೆಗೆ ಅರ್ಥ ಬರುತ್ತದೆ. ಸಮಾಜದ ಸೇವೆಯು ಪುಣ್ಯ ಕೆಲಸ ಮಾಡಿದಂತೆ ಎಂದು ಹೇಳಿದರು.

ಗುರು ಹಿರಿಯರನ್ನು ಗೌರವಿಸಿ ಎಂದು ಕರೆ ಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ರವರು, ಗ್ರಾಮದ ಸರ್ವ ಜನರ ಸಹಕಾರದಿಂದ ಶಿಬಿರವು ಯಶಸ್ವಿಯಾಗಿ ನಡೆದಿದೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತದನ್ನು ಜೀವನದಲ್ಲಿ ಅಳವಡಿಸುವುದರ ಮೂಲಕ ಶಿಸ್ತು ಬದ್ಧ ಜೀವನವನ್ನು ನಡೆಸಿ ಎಂದು ಕರೆಯನ್ನು ಕೊಟ್ಟರು. ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ವನ್ನು ಮಾಡಿದರು.

ಶಿಬಿರಗಳು ಪ್ರಮುಖ: ಸ್ಥಳೀಯರು ಹಾಗೂ ಭಾರತೀಯ ಭೂ ಸೇನೆಯ ನಿವೃತ ಕ್ಯಾಪ್ಟನ್ ಬಿ. ವಿ. ಭವಾನಿಶಂಕರ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೃಢ ನಿರ್ಧಾರ ಕೈಗೊಳ್ಳಲು ಇಂತಹ ಶಿಬಿರಗಳು ಪ್ರಮುಖವಾಗಿದೆ. ವಿದ್ಯಾರ್ಥಿಗಳು ಶಿಸ್ತು ಹಾಗೂ ಪ್ರಾಮಾಣಿಕತೆ ಕಲಿಯಲು ಎನ್ ಎಸ್ ಎಸ್ ಉತ್ತಮ ವೇದಿಕಯಾಗಿದೆ ಎಂದರು. ಇಲ್ಲಿ ಕಲಿತದ್ದನ್ನು ಶ್ರದ್ಧೆಯಿಂದ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.

ಮತ್ತೋರ್ವ ಅತಿಥಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜದ ಸೇವೆಯನ್ನು ಮಾಡಲು ಎನ್ ಎಸ್ ಎಸ್ ಉತ್ತಮ ಅವಕಾಶವನ್ನು ನೀಡುತ್ತದೆ. ಉತ್ತಮ ಆರೋಗ್ಯ, ತ್ಯಾಗದ ಮನೋಭಾವನೆ, ಮಾಡುವ ಕೆಲಸದಲ್ಲಿ ಗೌರವವಿದ್ದಲ್ಲಿ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಸಂವಹನ ಕೌಶಲ್ಯ ಹಾಗೂ ವೃತ್ತಿ ಕೌಶಲ್ಯ ಗಳನ್ನು ಅಳವಡಿಸಿಕೊಳ್ಳಿ ಎಂದು ಕರೆ ಕೊಟ್ಟರು. ಬೆಟೋಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ. ಮಣಿ ಅವರು ಶಿಬಿರದಲ್ಲಿ ವಿದ್ಯಾರ್ಥಿಗಳು ಮಾಡಿದ ಶ್ರಮದಾನ, ಸ್ವಚ್ಛತಾ ಅಭಿಯಾನ, ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಕ್ಕೆ ಮಾದರಿ: ಸ. ಹಿ. ಪ್ರಾ. ಶಾಲೆ ಹೆಗ್ಗಳದ ಮುಖ್ಯ ಶಿಕ್ಷಕಿ ಹೇಮಲತಾ ಮಾತನಾಡಿ, ನಮ್ಮ ಶಾಲೆಯಲ್ಲಿ ಎನ್ ಎಸ್ ಎಸ್ ಶಿಬಿರ ನಡೆದಿರುವುದು ಸಂತಸ ತಂದಿದೆ. ಸ್ವಯಂ ಸೇವಾ ವಿದ್ಯಾರ್ಥಿಗಳ ಸಮಯಪಾಲನೆ, ಶಿಸ್ತು,, ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಸಂಸ್ಥೆಯ ವತಿಯಿಂದ ಪ್ರತಿವರ್ಷವೂ ಎನ್ ಎಸ್ ಎಸ್ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ಹೆಗ್ಗಳ ಸರ್ಕಾರಿ ಶಾಲೆಯಲ್ಲಿ ಶಿಬಿರವು ಯಶಸ್ವಿಯಾಗಿ ನಡೆದಿದೆ. ಇದರಲ್ಲಿ ನಮ್ಮ ವಿದ್ಯಾರ್ಥಿಗಳ ಶ್ರಮ ಅಡಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷ ರಾಜೇಶ್, ಉಪನ್ಯಾಸಕಿ ವಿಲೀನ, ಬೆಟೋಳಿ ಗ್ರಾ.ಪಂ. ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ಎಲ್ಲ ಸ್ವಯಂ ಸೇವಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಗುಂಪುಗಳಿಗೆ ಅತಿಥಿಗಳು ಬಹುಮಾನವನ್ನು ನೀಡಿದರು. ನಿವೃತ್ತ ಕ್ಯಾಪ್ಟನ್ ಭವಾನಿಶಂಕರ್ ಅವರು ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಮಿ ಜಗದತ್ಮಾನಂದಾಜಿ ಅವರ ಬದುಕಲು ಕಲಿಯಿರಿ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಎನ್ ಎಸ್ ಎಸ್ ಘಟಕದ ಹಾಗೂ ತಂಡಗಳ ನಾಯಕರು ಶಿಬಿರದ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ನಿವೃತ್ತ ಕ್ಯಾಪ್ಟನ್ ಬಿ. ವಿ. ಭವಾನಿ ಶಂಕರ್, ಪೂಜಾ ಸಜೇಶ್, ಹೇಮಲತ, ಹಾಗೂ ರಾಜೇಶ್ ಬಿ. ಆರ್ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಎನ್ ಎಸ್ ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತಿಸಿ, ವಿದ್ಯಾರ್ಥಿನಿ ನಿಶಿ ನಿರೂಪಿಸಿ, ವಿದ್ಯಾರ್ಥಿನಿ ಪ್ರಕೃತಿ ವಂದಿಸಿದರು.

Share this article