ವಾರ್ಷಿಕೋತ್ಸವ । ಬಿಲಾಲ್ ಮಸೀದಿಯ ಧರ್ಮಗುರು । ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ಸಮಾರಂಭ
ವಿದ್ಯಾರ್ಥಿಗಳು ಏಕಾಗ್ರತೆಗೆ ಭಂಗ ತರುವ ದುಶ್ಚಟಗಳಿಂದ ದೂರವಿದ್ದು, ಅಧ್ಯಯನದಲ್ಲಿ ಕ್ರೀಯಾಶೀಲರಾಗಿ ಏಕಾಗ್ರತೆಯನ್ನು ರೂಢಿಸಿಕೊಳ್ಳಬೇಕು. ಸುಸಜ್ಜಿತವಾದ ಮತ್ತು ನುರಿತ ಶಿಕ್ಷಕವೃಂದ ಹೊಂದಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ಭಾಗದ ಸುತ್ತಮುತ್ತಲಿನ ಪೋಷಕರು ಇದರ ಸದುಪಯೋಗ ಪಡೆಯಬೇಕು ಎಂದು ಬಿಲಾಲ್ ಮಸೀದಿಯ ಧರ್ಮಗುರು ಮೌಲಾನಾ ಸಯ್ಯದ್ ಅಬ್ದುಲ್ ಖಾದರ್ ನೂರಿ ತಿಳಿಸಿದರು.
ನಗರದ ಮೈಸೂರು ರಸ್ತೆಯಲ್ಲಿರುವ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಈಗ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವುಗಳ ಪರಿಣಾಮ ಅನೇಕ ತಂತ್ರಜ್ಞಾನಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿದೆ. ಮಕ್ಕಳು ಶಿಕ್ಷಣದ ಮಹತ್ವ ಅರಿತು ಉಪಾಧ್ಯಾಯರ ಮಾರ್ಗದರ್ಶನದಂತೆ ನಡೆದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಎ.ಬಿ. ಗುರುಸಿದ್ದೇಶ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತೆರದುಕೊಳ್ಳುವ ಮನೋಭಾವ ಬೆಳಸಿಕೊಳ್ಳಬೇಕು. ಬದಲಾದ ವಿದ್ಯಮಾನದಲ್ಲಿ ಜ್ಞಾನ, ವಿಜ್ಞಾನ ತಂತ್ರಜ್ಞಾನದ ಫಲವಾಗಿ ಕುಳಿತಲ್ಲಿಯೇ ಜಾಗತಿಕ ಸಂಗತಿಗಳನ್ನು ತಿಳಿಯುವ ಅವಕಾಶ ಎಲ್ಲರಿಗೆ ಲಭಿಸಿದೆ. ಇಂತಹ ಅದ್ಭುತ ಮಾಹಿತಿ ಕಣಜದ ಲಾಭ ಪಡೆದು ಶೈಕ್ಷಣಿಕ ಭವಿಷ್ಯ ಉತ್ತಮಪಡಿಸಿಕೊಳ್ಳಲು ಚಿಂತನೆ ನಡೆಸಬೇಕು. ಗುರು, ಹಿರಿಯರನ್ನು ಗೌರವಿಸುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೆಕು ಎಂದು ಕಿವಿಮಾತು ಹೇಳಿದರು
ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರದಾಗಿದ್ದು ಎಲ್ಲಾ ವರ್ಗದ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳಲ್ಲಿ ಶಿಸ್ತು, ಸಂಯಮ, ಉತ್ತಮ ಗುಣ ಹಾಗೂ ಮೌಲ್ಯಗಳನ್ನು ಬೆಳೆಸುವ ಮೂಲಕ ಈ ದೇಶದ ಉತ್ತಮ ಪ್ರಜೆಗಳಾಗಿ ಮಾಡಬೇಕೆಂದರು.
ಸಮಾರಂಭದಲ್ಲಿ ನಗರಸಭೆ ಸದಸ್ಯ ಈಶ್ವರಪ್ಪ, ಮುಖಂಡರಾದ ಹರ್ಷವರ್ಧನ್, ಕರಿಸಿದ್ದಪ್ಪ, ಹಾರನಹಳ್ಳಿ ಓಂಕಾರಮೂರ್ತಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು. ವಿವಿಧ ತರಗತಿಗಳ ಚಿಣ್ಣರು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಎಲ್ಲರ ಗಮನಸೆಳೆಯಿತು. ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಆಡಳಿತಾಧಿಕಾರಿ ಎ.ಬಿ. ಗುರುಸಿದ್ದೇಶ್ ಉದ್ಘಾಟಿಸಿದರು. ಮೌಲಾನಾ ಸಯ್ಯದ್ ಅಬ್ದುಲ್ ಖಾದರ್ ನೂರಿ, ಸಯ್ಯದ್ ಸಿಕಂದರ್, ಕರಿಸಿದ್ದಪ್ಪ, ಓಂಕಾರಮೂರ್ತಿ ಇದ್ದಾರೆ.