ಕನ್ನಡಪ್ರಭ ವಾರ್ತೆ ಸಕಲೇಶಪುರ
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ಕೆಲ ಮತದಾರರಿಗೆ ನೋಟೀಸ್ ಜಾರಿಯಾಗಿದ್ದು, ನಿಗದಿತ ವಿಚಾರಣಾ ಕೇಂದ್ರಕ್ಕೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. ಆದರೆ ಅನಾರೋಗ್ಯ, ವಯೋಸಹಜ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವು ಮತದಾರರಿಗೆ ವಿಚಾರಣಾ ಕೇಂದ್ರಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇಂತಹ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂಬಂಧಪಟ್ಟ ಮತದಾರರ ಮನೆಗಳಿಗೆ ತೆರಳಿ ವಿಚಾರಣೆ ನಡೆಸಿದರು. ಹಾನುಬಾಳು ಗ್ರಾಮದ ಖಲಂದರ್ ಷರೀಫ್ ಸೇರಿದಂತೆ ಅನಾರೋಗ್ಯ ಪೀಡಿತ ಮತದಾರರ ಮನೆಗಳಿಗೆ ಭೇಟಿ ನೀಡಿ ನಮೂನೆ, ಮತದಾರರ ದಾಖಲೆಗಳು, ವಿಳಾಸ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಿ, ಮತದಾರರಿಂದ ಮಾಹಿತಿ ಪಡೆದು ಸ್ಥಳದಲ್ಲೇ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಅನಾರೋಗ್ಯದ ಕಾರಣದಿಂದ ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದೆ ವಿಚಾರಣೆಯಿಂದ ದೂರ ಉಳಿದಿರುವ ಮತದಾರರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧಪಟ್ಟವರು ನೈಜ ಹಾಗೂ ಅರ್ಹ ಮತದಾರರಾಗಿದ್ದರೆ ಅವರ ಮತದಾನದ ಹಕ್ಕು ಉಳಿಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮತದಾರರು ಅನಾರೋಗ್ಯ ಅಥವಾ ವಯೋಸಹಜ ಸಮಸ್ಯೆಯಂತಹ ಕಾರಣಗಳಿಂದ ವಿಚಾರಣಾ ಕೇಂದ್ರಕ್ಕೆ ಹಾಜರಾಗಲು ಸಾಧ್ಯವಾಗದ ಸಂದರ್ಭದಲ್ಲಿ ಅವರ ಮನೆಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. SIR ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಅವಕಾಶ ವಂಚಿತರಾಗದಂತೆ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಸಂಬಂಧಪಟ್ಟ ಬಿಎಲ್‌ಒ (ಮತಗಟ್ಟೆ ಮಟ್ಟದ ಅಧಿಕಾರಿ) ಹಾಗೂ ಬಿಎಲ್‌ಒ ಮೇಲ್ವಿಚಾರಕರು ಉಪಸ್ಥಿತರಿದ್ದು, ವಿಚಾರಣಾ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡಿದರು.