ಅಧಿಕಾರಿಗಳಿಗೆ ಸೂಚನೆ । ಟ್ಯಾಂಕರ್ ಮೂಲ ನೀರು ಸರಬರಾಜು । ಬರ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಕಕನ್ನಡಪ್ರಭ ವಾರ್ತೆ ಮಂಡ್ಯ
ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯತೆಗಳು, ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಜಿಲ್ಲೆಯ ಎಲ್ಲಾ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿವೆ. ಆಯಾ ತಾಲೂಕು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಮುನ್ನ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ದೊರಕುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಪಡೆಯಲು ಟೆಂಡರ್ ಕರೆದು ನಿಗದಿ ಪಡಿಸಿದ ದರಕ್ಕೆ ಪಡೆಯಬೇಕು ಎಂದರು.ಟ್ಯಾಂಕರ್ ಆ್ಯಪ್ ಮೂಲಕ ಅದರ ವಿವರ ಅಪ್‌ಲೋಡ್ ಮಾಡಿ ನಂತರ ಸರಬರಾಜು ಮಾಡಬೇಕು. ಬರ ನಿರ್ವಹಣೆಗಾಗಿ ಎಲ್ಲಾ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ತಪ್ಪದೇ ವಾರಕೊಮ್ಮೆ ತಾಲೂಕಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ಹೇಳಿದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಾಗಮಂಗಲ ತಾಲೂಕಿನಲ್ಲಿ ಎ. ಶಾನಬೋಗನಹಳ್ಳಿ, ಮುದ್ದನಹಳ್ಳಿ ಹಾಗೂ ಒಣಕೆರೆ ಗ್ರಾಮಗಳಿಗೆ ಮಳವಳ್ಳಿ ತಾಲೂಕಿನಲ್ಲಿ ಬಸವನಹಳ್ಳಿ ಗ್ರಾಮಕ್ಕೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಒದಗಿಸಲಾಗುತ್ತಿದೆ.ಕೆ.ಆರ್. ಪೇಟೆಯಲ್ಲಿ ಕೂಟಗಳ್ಳಿ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಂಬಂಧಿಸಿದ ತಹಸೀಲ್ದಾರ್‌ಗಳು ಸಭೆಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿವಾಗ ಟ್ಯಾಂಕರ್ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ದೃಢೀಕರಣ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ನೀರಾವರಿ ಹಾಗೂ ಫೆನ್ಸಿಂಗ್ ಇರುವ ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ಎರಡು ಎಕರೆ ಭೂಮಿಯನ್ನು ತಾಲೂಕುವಾರು ಗುರುತಿಸಿ ಮೇವಿನ ಬೆಳೆ ಬೆಳೆಯಲು ಸಹ ಯೋಜನೆಯಲ್ಲಿ ಸೇರಿಸಲಾಗಿದೆ. ಬರ ಹಾಗೂ ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೇಕಿರುವ ಔಷಧಿಗಳು, ಫ್ಲೂಯಿಡ್‌ಗಳು ಸೇರಿದಂತೆ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೆಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಪಂ ಉಪಕಾರ್ಯದರ್ಶಿ ಆನಂದ್, ಉಪವಿಭಾಗಾಧಿಕಾರಿ ಶಿವಮೂರ್ತಿ, ನಂದೀಶ್, ಪಶು ವೈದ್ಯಾಧಿಕಾರಿ ಡಾ. ಸುರೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೆಶಕಿ ಎಂ.ವಿ. ತುಷಾರಮಣಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ ಉಪಸ್ಥಿತರಿದ್ದರು.- - -
ಬಾಕ್ಸ್..ಬರ ನೀಗಿಸಲು 750 ಟನ್
ಮೇವು ಬೆಳೆಯುವ ಗುರಿಜಿಲ್ಲೆಯಲ್ಲಿ ವಿ.ಸಿ. ಫಾರರ್ಮ್‌ನಲ್ಲಿ ಅಧೀನದಲ್ಲಿರುವ 15 ಎಕರೆಯನ್ನು ಒಪ್ಪಂದ ಮಾಡಿಕೊಂಡು ಮೇವು ಬೆಳೆಯಲು ಯೋಜನೆ ಸಿದ್ಧಪಡಿಸಿದ್ದು, ಅನುಮೋದನೆ ಕೋರಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ಒಪ್ಪಿಗೆ ನೀಡಿದರೆ ವಿ.ಸಿ. ಫಾರ್ಮ್ ವಿಜ್ಞಾನಿಗಳ ಸಹಕಾರ ಪಡೆದು ಇಲ್ಲಿ 750 ಟನ್ ಮೇವು ಬೆಳೆಯಬಹುದು ಎಂದು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.5ಕೆಎಂಎನ್ ಡಿ18
ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಯಿತು.