ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸು ವರದಿಯನ್ನು ಬೇಗ ಕೊಡಿ : ಸಚಿವ ಮಧುಬಂಗಾರಪ್ಪ

KannadaprabhaNewsNetwork |  
Published : Jun 22, 2025, 01:19 AM ISTUpdated : Jun 22, 2025, 01:34 PM IST
ಪೊಟೋ: 21ಎಸ್‌ಎಂಜಿಕೆಪಿ03ಶಿವಮೊಗ್ಗದ ನಗರದ ಮಲ್ಲಿಗೇನಹಳ್ಳಿಯ ಸನ್ನಿಧಿ ಪಾಲನಾ ನವೀಕರಣ ಕೇಂದ್ರದಲ್ಲಿ ಶನಿವಾರ ಸಂವಿಧಾನ ಓದು ಅಭಿಯಾನ ಕರ್ನಾಟಕ, ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸುಗಳ ವರದಿಯನ್ನು ಬೇಗನೇ ಸರ್ಕಾರಕ್ಕೆ ಸಲ್ಲಿಸುವಂತೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ ದಾಸ್ ಅವರಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮನವಿ ಮಾಡಿದರು.

 ಶಿವಮೊಗ್ಗ :  ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸುಗಳ ವರದಿಯನ್ನು ಬೇಗನೇ ಸರ್ಕಾರಕ್ಕೆ ಸಲ್ಲಿಸುವಂತೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ ದಾಸ್ ಅವರಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮನವಿ ಮಾಡಿದರು.

ನಗರದ ಮಲ್ಲಿಗೇನಹಳ್ಳಿಯ ಸನ್ನಿಧಿ ಪಾಲನಾ ನವೀಕರಣ ಕೇಂದ್ರದಲ್ಲಿ ಶನಿವಾರ ಸಂವಿಧಾನ ಓದು ಅಭಿಯಾನ ಕರ್ನಾಟಕ, ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಸದ್ಯ 51 ಸಾವಿರ ಶಿಕ್ಷಕರ ಕೊರತೆ ಇದೆ. ಅದರಲ್ಲಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆ ದೊರೆತಿದೆ. ಒಳಮೀಸಲಾತಿ ಹಂಚಿಕೆ ವರ್ಗೀಕರಣ ಕಾರ್ಯ ಪೂರ್ಣಗೊಂಡಲ್ಲಿ ನೇಮಕಾತಿಗೆ ಚಾಲನೆ ದೊರೆಯಲಿದೆ. ಸದ್ಯ ಅತಿಥಿ ಶಿಕ್ಷಕರ ನೇಮಕದ ಮೂಲಕ ಆ ಕೊರತೆ ನೀಗಿಸಿಕೊಳ್ಳಲಾಗಿದೆ ಎಂದರು.

ಸಂವಿಧಾನದ ಅರಿವನ್ನು ಮೂಡಿಸುವ ಉದ್ದೇಶದಿಂದಲೇ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದುವುದನ್ನು ನಾನು ಶಿಕ್ಷಣ ಸಚಿವನಾದ ಮೇಲೆ ಕಡ್ಡಾಯವನ್ನಾಗಿ ಮಾಡಿದ್ದೇನೆ. ಶಿಕ್ಷಕರು ಕಡ್ಡಾಯವಾಗಿ ಸಂವಿಧಾನ ಪೀಠಿಕೆ ಓದಿಸಬೇಕು. ಮತ್ತು ಕ್ರಮೇಣ ಅರ್ಥ ಮಾಡಿಸಬೇಕು. ಡಿಡಿಪಿಐ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಂವಿಧಾನ ಓದು ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುವುದೇ ಒಂದು ಪುಣ್ಯದ ಕೆಲಸ. ಇದು ನಮ್ಮ ಕರ್ತವ್ಯವೂ ಹೌದು. ನೆಲ, ಜಲ, ಭಾಷೆ, ಧರ್ಮ ಎಲ್ಲವೂ ಸೇರಿಯೇ ಭಾರತವಾಗಿದೆ. ಇದರ ರಕ್ಷಣೆಗೆ ಸಂವಿಧಾನವೇ ನಿಂತುಕೊಂಡಿದೆ. ಸಂವಿಧಾನವನ್ನು ನಾವು ರಕ್ಷಿಸಬೇಕಾದ ಸಂದರ್ಭ ಬಂದಿರುವುದು ವಿಷಾದನೀಯ. ಆದರೆ ಭಾರತೀಯರಿಗೆ ಸಂವಿಧಾನವೇ ಶ್ರೇಷ್ಟ ಗ್ರಂಥ ಎಂದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, ಸಂವಿಧಾನದ ಓದು ಪ್ರಜಾಪ್ರಭುತ್ವದ ಅರಿವನ್ನು ವಿಸ್ತರಿಸುತ್ತದೆ ಎಂದರು.

ಭಾರತ ದೇಶವನ್ನು ತಿಳಿಯದೇ ಭಾರತ ಸಂವಿಧಾನ ತಿಳಿಯಲು ಸಾಧ್ಯವಿಲ್ಲ. ಸಂವಿಧಾನ ತಿಳಿಯದೇ ಅದರ ಮೂಲ ತತ್ವವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಅಧಿಕಾರ, ನ್ಯಾಯಾಂಗ, ಕಾರ್ಯಾಂಗದ ವ್ಯಾಪ್ತಿಗಳು ಅದರ ಸ್ವೇಚ್ಛಾಚಾರ ಇವುಗಳನ್ನೆಲ್ಲಾ ಸಂವಿಧಾನದ ಮೂಲಕವೇ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಂಸ್ಕೃತಿ, ಉಪಸಂಸ್ಕೃತಿ, ಧರ್ಮ, ಜಾತಿ, ಆರ್ಥಿಕ, ಸಾಮಾಜಿಕ ಸಂಬಂಧಗಳು ಇವೆಲ್ಲವೂ ಸಂವಿಧಾನದ ಓದಿನಿಂದ ಮನನವಾಗುತ್ತವೆ. ಸಂವಿಧಾನ ಅರ್ಥ ಮಾಡಿಕೊಳ್ಳುವುದರಿಂದ ಸಹಿಷ್ಣುತೆ ಹೆಚ್ಚುತ್ತದೆ ಎಂದರು.

ಸಮ ಸಮಾಜದ ನಿರ್ಮಾಣ ಭಾರತೀಯತೆ, ಮಾನವೀಯತೆ ಈ ಮುಂತಾದ ಅಂಶಗಳನ್ನಿಟ್ಟುಕೊಂಡೇ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನದ ಆಶಯಗಳು ಕಟ್ಟಕಡೆಯ ಮನುಷ್ಯರನ್ನು ತಲುಪಬೇಕು. ಸಂವಿಧಾನ ಎಲ್ಲಾ ಮನುಷ್ಯರು ಸಮಾನರು ಎಂಬ ತತ್ವದ ಅಡಿಯಲ್ಲಿಯೇ ರೂಪುಗೊಂಡಿದೆ ಎಂದರು.

ಸಂಯೋಜಕ ಮತ್ತು ಕಾರ್‍ಯಕ್ರಮ ಆಯೋಜಕ ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಓದು ಅಧ್ಯಯನ ಶಿಬಿರದಿಂದ ಭಾರತ ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನ ಓದು ಇಂದು ಅನಿವಾರ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಸನ್ನಿಧಿ ಪಾಲನಾ ನವೀಕರಣ ಕೇಂದ್ರದ ನಿರ್ದೇಶಕ ಫಾ. ಕ್ಲಿಫರ್ಡ್ ರೋಷನ್ ಪಿಂಟೋ, ಹಿರಿಯ ವಕೀಲ ಜಿ.ಎಸ್. ನಾಗರಾಜ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಒ ಹೇಮಂತ ಕುಮಾರ್, ಸಂಪನ್ಮೂಲ ವ್ಯಕ್ತಿ ಬಿ. ರಾಜಶೇಖರ್ ಮೂರ್ತಿ, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಹಲವರಿದ್ದರು. ಪತ್ರಕರ್ತ ಆರ್.ಎಸ್. ಹಾಲಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ